ರಿಯಾನ್ ಪರಾಗ್‌ಗೆ 12 ವರ್ಷಗಳ ಕನಸು ನನಸಾಯಿತು
ಐದರ ಹರೆಯದಲ್ಲಿ ಧೋನಿಯ ಮೊದಲ ಭೇಟಿ
ಹೊಸದಿಲ್ಲಿ, ಮೇ 2: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರನ್ನು ಮೊದಲ ಸಲ ಭೇಟಿಯಾಗುವಾಗ ರಿಯಾನ್ ಪರಾಗ್‌ಗೆ ಐದು ವರ್ಷವಾಗಿತ್ತು. ಈಗ ಪರಾಗ್ ಸಾಮಾನ್ಯ ಅಭಿಮಾನಿ ಅಲ್ಲ, ಅವರೊಬ್ಬ ಕ್ರಿಕೆಟಿಗ. 17ರ ಹರೆಯದ ಉದಯೋನ್ಮುಖ ಪ್ರತಿಭೆ ರಿಯಾನ್ ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸಮನ್ ಹಾಗೂ ಅರೆಕಾಲಿಕ ಬೌಲರ್ ಆಗಿದ್ದಾರೆ.
ಮೊದಲ ಬಾರಿ ಧೋನಿಯನ್ನು 2007ರಲ್ಲಿ ಗುವಾಹತಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಭೇಟಿಯಾಗಿದ್ದರು. ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಆಟೋಗ್ರಾಫ್ ಪಡೆದಿದ್ದರು. ಪಾಕಿಸ್ತಾನ ವಿರುದ್ಧದ ಐದು ಪಂದ್ಯದಲ್ಲಿ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲುವಿಗೆ 240 ರನ್‌ಗಳ ಸವಾಲನ್ನು ಪಡೆದಿತ್ತು. ಆಗ ತಂಡದ ನಾಯಕರಾಗಿದ್ದ ಧೋನಿ 77 ಎಸೆತಗಳಲ್ಲಿ 63 ರನ್ ದಾಖಲಿಸಿ ತಂಡದ ಗೆಲುವಿಗೆ ನೆರವಾಗಿದ್ದರು. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಪಂದ್ಯದ ಬಳಿಕ ರಿಯಾನ್‌ಗೆ ಧೋನಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಇದಕ್ಕಾಗಿ ಬಹಳ ಹೊತ್ತು ಕಾದಿದ್ದರು. ಅಂದೇ ಅವರು ಧೋನಿಯೊಂದಿಗೆ ಆಡುವ ಕನಸು ಕಂಡಿದ್ದರು. 12 ವರ್ಷಗಳ ಬಳಿಕ ಅವರ ಕನಸು ನಸಸಾಯಿತು. ಅಸ್ಸಾಂನ ಹುಡುಗ ರಿಯಾನ್ ಎ.17ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಐಪಿಎಲ್ ಪದಾರ್ಪಣೆ ಮಾಡಿದ್ದರು. ಧೋನಿ ಜೊತೆ ಕ್ರೀಡಾಂಗಣದಲ್ಲಿ ಆಡುವ ಕನಸನ್ನು ನನಸಾಗಿಸಿದ್ದರು. 14 ಎಸೆತಗಳಲ್ಲಿ 16 ರನ್ ಗಳಿಸಿದ್ದ ಅವರು ಧೋನಿಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು.
ಜೈಪುರದಲ್ಲಿ ಮುಂಬೈ ವಿರುದ್ಧ ಪಂದ್ಯದಲ್ಲಿ 29 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 43 ರನ್ ಗಳಿಸಿದ್ದರು. ನಾಯಕ ಸ್ಟೀವ್ ಸ್ಮಿತ್ ಜೊತೆ 70 ರನ್‌ಗಳ ಜೊತೆಯಾಟ ನೀಡಿದ್ದರು.ಕೋಲ್ಕತಾದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 31 ಎಸೆತಗಳಲ್ಲಿ 47 ರನ್ ಸಿಡಿಸಿದ್ದರು. ರಿಯಾನ್ ತಂಡ ಈ ಪಂದ್ಯದಲ್ಲಿ 3 ವಿಕೆಟ್‌ಗಳ ಜಯ ಗಳಿಸಿತ್ತು. ಐಪಿಎಲ್‌ನಲ್ಲಿ ಇದು ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು.
ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿರುವ ರಿಯಾನ್ 2018ರಲ್ಲಿ ವಿಶ್ವಕಪ್ ಜಯಿಸಿದ ಭಾರತದ ಅಂಡರ್-19 ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ರಿಯಾನ್ ಪರಾಗ್ 20 ಲಕ್ಷ ರೂ. ಮೂಲಬೆಲೆಗೆ ರಾಜಸ್ಥಾನ ರಾಯಲ್ಸ್ ತಂಡ ಸೇರಿದ್ದರು.
ರಿಯಾನ್ ಪರಾಗ್ ತಂದೆ ಪರಾಗ್ ದಾಸ್ ಅಸ್ಸಾಂ ಪರ 13 ಪ್ರಥಮ ದರ್ಜೆ ಮತ್ತು 32 ಎ ಲಿಸ್ಟ್ ಪಂದ್ಯಗಳನ್ನು ಆಡಿದವರು. 1999-2000ರಲ್ಲಿ ರಣಜಿ ಟ್ರೋಫಿ ಪಂದ್ಯದಲ್ಲಿ ಧೋನಿ ವಿರುದ್ಧ ಆಡಿದ್ದರು. ಬಿಹಾರ ತಂಡದ ಧೋನಿ ಎರಡನೇ ಇನಿಂಗ್ಸ್‌ನಲ್ಲಿ ಆರಂಭಿಕ ದಾಂಡಿಗ ಪರಾಗ್‌ರನ್ನು ಸ್ಟಂಪ್ ಮಾಡಿದ್ದರು. ಅದು ಅವರ ಚೊಚ್ಚಲ ಪಂದ್ಯವಾಗಿತ್ತು.







