ಐಪಿಎಲ್ ಪ್ರಚಾರಕ್ಕೆ 50 ಕೋ.ರೂ. ವ್ಯಯಿಸಿದ ಬಿಸಿಸಿಐ!
ಹೊಸದಿಲ್ಲಿ, ಮೇ 2: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ವಿಶ್ವದ ಒಂದು ಅತ್ಯಂತ ಆಕರ್ಷಕ ಟೂರ್ನಮೆಂಟ್ ಆಗಿದೆ. ಆದಾಗ್ಯೂ ಪ್ರಮುಖ ಟಿ-20 ಲೀಗ್‌ನ ಪ್ರಚಾರಕ್ಕಾಗಿ ಜಾಹೀರಾತುಗಳ ಮೊರೆ ಹೋಗಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಈಗ ನಡೆಯುತ್ತಿರುವ 12ನೇ ಆವೃತ್ತಿಯ ಐಪಿಎಲ್‌ನ ಪ್ರಚಾರ ಜಾಹೀರಾತಿಗಾಗಿ 50 ಕೋ.ರೂ. ವ್ಯಯಿಸಿದೆ.
2019ರ ಆವೃತ್ತಿಯ ಟೂರ್ನಮೆಂಟ್‌ಗಾಗಿ ಬಿಸಿಸಿಐ ತನ್ನ ಬಜೆಟ್‌ನಲ್ಲಿ ಪ್ರಚಾರ ಜಾಹೀರಾತಿನ ವೆಚ್ಚವನ್ನು ಲೆಕ್ಕಹಾಕಿದೆ. ದಾಖಲೆಗಳ ಪ್ರಕಾರ 50 ಕೋ.ರೂ. ವ್ಯಯಿಸಲಾಗಿದೆ. 2018ರ ಆವೃತ್ತಿಯಲ್ಲೂ ಟಿ-20ಲೀಗ್ ಪ್ರಚಾರಕ್ಕಾಗಿ ಇಷ್ಟೇ ಮೊತ್ತದ ಹಣ ವ್ಯಯಿಸಲಾಗಿದೆ.
ಪ್ರಚಾರ ಚಟುವಟಿಕೆಗಳ ಹಿಂದೆ ಯೋಜನೆ ಹೇಗಿತ್ತು ಎಂಬ ಬಗ್ಗೆ ಮಾತನಾಡಿದ ಬಿಸಿಸಿಐ ಕಾರ್ಯಕಾರಿ ಸದಸ್ಯರೊಬ್ಬರು, ಟೂರ್ನಮೆಂಟ್ ಆರಂಭಕ್ಕೆ ಮೊದಲು ಹಾಗೂ ನಾಕೌಟ್ ಹಂತಗಳ ಆರಂಭಕ್ಕೆ ಮುಂಚೆ ಗರಿಷ್ಠ ಮಟ್ಟದ ಜಾಗೃತಿ ಮೂಡಿಸಲಾಗಿದೆ. ಇದನ್ನು ಮುಖ್ಯವಾಗಿ 2 ಹಂತಗಳಲ್ಲಿ ಮಾಡಲಾಗಿದೆ. ಟೂರ್ನಮೆಂಟ್ ಆರಂಭಕ್ಕೆ 1 ತಿಂಗಳು ಇರುವಾಗ 80 ಶೇ. ಪ್ರಚಾರ ಮಾಡಲಾಗಿತ್ತು. ಪ್ಲೇ-ಆಫ್ ಆರಂಭಕ್ಕೆ ಮೊದಲು ಪ್ರಚಾರ ನಡೆಸಲಾಗುವುದು. ದಿನಪತ್ರಿಕೆಗಳಲ್ಲಿ ಹಲವು ಜಾಹೀರಾತುಗಳನ್ನು ನೀವು ನೋಡಿರಬಹುದು. ಬೀದಿಬದಿಗಳಲ್ಲಿ ಹೋರ್ಡಿಂಗ್ ಹಾಕಿರುವುದು ಪ್ರಚಾರ ಪ್ರಕ್ರಿಯೆ ಒಂದು ಭಾಗವಾಗಿದೆ ಎಂದರು.







