ಕುಡಿಯುವ ನೀರಿಗೆ ಬರ: ಅಪಾಯಕಾರಿ ಹೆದ್ದಾರಿ ದಾಟಿ ನೀರು ತರುತ್ತಿದ್ದಾರೆ ಗ್ರಾಮಸ್ಥರು !
ಗುಂಡ್ಲುಪೇಟೆ ತಾಲೂಕಿನ ರಾಘವಾಪುರದಲ್ಲಿ ಜೀವಜಲಕ್ಕಾಗಿ ಪರದಾಟ

ಚಾಮರಾಜನಗರ,ಮೇ 3: ಮೂರು ರಾಜ್ಯಗಳಿಗೆ ಸಂಪರ್ಕ ಹೊಂದುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗ್ರಾಮದಲ್ಲಿ ಕುಡಿಯುವ ನೀರಿಗೆ ಬರ ಉಂಟಾಗಿದ್ದು, ಕುಡಿಯುವ ನೀರಿಗಾಗಿ ಅಪಾಯಕಾರಿ ಹೆದ್ದಾರಿ ದಾಟುವ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಸಂಪರ್ಕ ಹೊಂದುವ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ಇರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಾಘವಾಪುರದಲ್ಲಿ ಜೀವಜಲಕ್ಕಾಗಿ ಪ್ರತಿನಿತ್ಯ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಸಾಗುವ ದೃಶ್ಯ ಕಾಣುತ್ತದೆ.
ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ರಾಘವಾಪುರದಲ್ಲಿ ಕುಡಿಯುವ ನೀರಿಗೆ ವೃದ್ದರು ಮಹಿಳೆಯರು, ಮಕ್ಕಳು ಅಪಾಯವನ್ನು ಲೆಕ್ಕಿಸದೇ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಸಿಗುವ ನೀರನ್ನು ಬಿಂದಿಗೆಯಲ್ಲಿ ತುಂಬಿಸಿ ರಸ್ತೆ ದಾಟುವ ದುಸ್ಸಾಹಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರು ರಾಜ್ಯಗಳಿಗೆ ಸಾಗುವ ವಾಹನಗಳು ಅತೀ ವೇಗವಾಗಿ ಸಂಚರಿಸುವಾಗ ಒಂದಲ್ಲಾ ಒಂದು ಅನಾಹುತ ನಡೆಯುತ್ತಿದ್ದರೂ ಸಹ ಅಧಿಕಾರಿಗಳು ನೋಡಿಯೂ ಜಾಣ ಕುರುಡರಂತೆ ಇರುವುದು ದುರಂತ. ಪ್ರತಿ ನಿತ್ಯ ಇದೇ ಮಾರ್ಗವಾಗಿ ಗುಂಡ್ಲುಪೇಟೆ ತಾಲೂಕು ಮಟ್ಟದ ಅಧಿಕಾರಿಗಳು ಬಸ್ ಹಾಗೂ ಸರ್ಕಾರಿ ವಾಹನದಲ್ಲಿ ಸಾಗಿದರೂ ಇಂತಹ ಮನಕಲಕುವ ದೃಶ್ಯ ಕಂಡರೂ ಕೂಡ ಇದಕ್ಕೆ ಪರಿಹಾರ ಕಂಡುಕೊಳ್ಳವಲ್ಲಿ ವಿಫಲರಾಗಿದ್ದಾರೆ ಎನ್ನುವ ಆರೋಪಗಳು ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.
'ಮನೆಯಲ್ಲಿ ಪ್ರತಿಯೊಂದು ಕೆಲಸಕ್ಕೂ ನೀರು ಬೇಕು, ಆದರೆ ನೀರು ಗ್ರಾಮದಲ್ಲಿ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಹಲವಾರು ಭಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಪ್ರಯೋಜನವಾಗಿಲ್ಲ. ವಿಧಿ ಇಲ್ಲದೆ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕಬಿನಿ ನದಿ ಮೂಲದ ನೀರನ್ನು ತೆಗೆದುಕೊಳ್ಳಲು ನಿತ್ಯ ಜೀವ ಕೈ ಹಿಡಿದುಕೊಂಡು ನೀರು ತರುವ ಸಾಹಸ ಮಾಡುತ್ತಿದ್ದೇವೆ. ಇದಕ್ಕೆ ಜನಪ್ರತಿನಿಧಿಗಳ ಹಿತಾಸಕ್ತಿ ಕೊರತೆಯೇ ಮೂಲ ಕಾರಣವಾಗುತ್ತಿದೆ' ಎನ್ನುವುದು ನಿವಾಸಿಗಳ ದೂರಾಗಿದೆ.
'ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ನಿತ್ಯವೂ ಅಪಘಾತಗಳು ನಡೆಯುತ್ತಿದ್ದರೂ, ಸಹ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರಾಘವಾಪುರ ಗ್ರಾಮದಲ್ಲಿ ಉಲ್ಬಣಗೊಂಡಿರುವ ಕುಡಿಯುವ ನೀರಿನ ಹಾಹಾಕಾರ ನಿಯಂತ್ರಣ ಮಾಡಲು ಪ್ರಯತ್ನ ಮಾಡುತ್ತಿಲ್ಲ, ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಜನರ ಬವಣೆ ಬೇಡವಾಗಿದೆ' ಎನ್ನುತ್ತಾರೆ ಸ್ಥಳೀಯ ನಾಗರಿಕ ಸಂತೋಷ್.
'ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಸರ್ಕಾರವು ಕೋಟ್ಯಾಂತರ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಿದ್ದರೂ ಸಹ ಗ್ರಾಮಾಂತರ ಪ್ರದೇಶದಲ್ಲಿ ಮೂಲಭೂತ ಸೌಲಭ್ಯವಾಗಿರುವ ಜೀವಜಲ ಸರಬರಾಜು ಮಾಡಲು ಹಿಂದೇಟು ಹಾಕುತ್ತಿರುವ ಬಗ್ಗೆ ಇರುವ ಮರ್ಮ ಏನೆಂದು ತಿಳಿಯದಾಗಿದೆ ಎಂದು ನಾಗರಾಜು ಎಂಬವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.









