ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸಿದರೆ ಹೊಸ ಜಗತ್ತನ್ನೆ ನಿರ್ಮಿಸಲಿದ್ದಾರೆ: ಶೋಭಾ ಕರಂದ್ಲಾಜೆ
ಬೆಂಗಳೂರು ಉತ್ಸವದ ಪ್ರಯುಕ್ತ ಮೇ12ರ ವರೆಗೆ ಕಲಾಕೃತಿಗಳ ಮಾರಾಟ ಮೇಳ

ಬೆಂಗಳೂರು, ಮೇ 3: ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸಿದರೆ ಹೊಸ ಜಗತ್ತನ್ನೆ ನಿರ್ಮಿಸಬಲ್ಲರು ಎಂಬುದನ್ನು ನಗರದ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿರುವ ಬೆಂಗಳೂರು ಉತ್ಸವ ನೋಡಿದವರಿಗೆ ಅನಿಸದೆ ಇರದು ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಿಸಿದರು.
ಶುಕ್ರವಾರ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಇಂದಿನಿಂದ 10 ದಿನಗಳ ಕಾಲ ಆಯೋಜಿಸಲಾಗಿರುವ ಬೆಂಗಳೂರು ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರಿಗೆ ಪೋಷಣೆ, ಕಲೆಗೆ ಸೂಕ್ತ ವೇದಿಕೆ ಕಲ್ಪಿಸುವುದು ಸಂಘ-ಸಂಸ್ಥೆಗಳ ಜವಾಬ್ದಾರಿಯಾಗಿದೆ. ಇಂತಹ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಕರ್ನಾಟಕ ಚಿತ್ರಕಲಾ ಪರಿಷತ್‌ನ ಕಾರ್ಯ ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜಕೀಯದಲ್ಲಿ ಇರುವವರಿಗೆ ಚುನಾವಣೆಗಳು ಸಾಮಾನ್ಯ. ಒಂದು ಚುನಾವಣೆ ಮುಗಿದ ಕೂಡಲೇ ಇನ್ನೊಂದು ಚುನಾವಣೆ ಪ್ರಾರಂಭವಾಗುತ್ತವೆ. ಆದರೆ, ಈ ಬಾರಿಯ ಲೋಕಸಭಾ ಚುನಾವಣೆ ಮುಗಿಸಿದ ನಂತರ ಇಂತಹ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಭಾಗವಹಿಸಿ ಶಾಪಿಂಗ್ ಮಾಡಿದ್ದು ಖುಷಿ ಆಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಕರ್ನಾಟಕ ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಕಲಾವಿದರಿಗೆ ಸೂಕ್ತ ವೇದಿಕೆಯನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಈ ರೀತಿಯ ಉತ್ಸವಗಳ ಮೂಲಕ ಜನರು ಹಾಗೂ ಕಲಾವಿದರ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
ಕಲಾವಿದರಿಗೆ ತಮ್ಮ ಕಲಾಕೃತಿಗಳನ್ನು ಮಾರಾಟ ಮಾಡುವ ಸದಾವಕಾಶ ಹಾಗೂ ಜನರಿಗೆ ಕಲಾವಿದರಿಂದಲೇ ಕಲಾಕೃತಿಗಳನ್ನು ಕೊಂಡುಕೊಳ್ಳುವ ಅವಕಾಶ ಇದಾಗಿದೆ. ಮೇ 3 ರಿಂದ ಮೇ 12 ರ ವರೆಗೆ ಈ ಬೆಂಗಳೂರು ಉತ್ಸವ ನಡೆಯಲಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರೊ.ಜೆ ಕಮಲಾಕ್ಷಿ, ಕ್ಯೂರೇಟರ್ ಅಪ್ಪಾಜಯ್ಯ, ಆಯೋಜಕರಾದ ಅಫ್ತಾಬ್ ಮಜೀದ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ನಾಲ್ಕೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಹೆಸರಿನ ಮೀನುಗಾರಿಕಾ ಬೋಟ್‌ನ್ನು ಪತ್ತೆಹಚ್ಚಿರುವ ಜಲಸೇನಾ ಅಧಿಕಾರಿಗಳ ಕಾರ್ಯ ಶ್ಲಾಘನೀಯ. ಕೇಂದ್ರದ ರಕ್ಷಣಾ ಮಂತ್ರಿ ಬಳಿ ನಾವು ಮಾಡಿಕೊಂಡಿದ್ದ ಮನವಿ ಸಫಲವಾಗಿದೆ.
-ಶೋಭಾ ಕರಂದ್ಲಾಜೆ, ಬಿಜೆಪಿ ಸಂಸದೆ







