ಪತ್ನಿಯಿಂದಲೇ ರೌಡಿ ಶೀಟರ್ ಕೊಲೆ

ಬೆಂಗಳೂರು, ಮೇ 3: ನಗರದ ರೌಡಿಶೀಟರ್ ಎಡ್ವಿನ್(34) ಅನ್ನು ಪತ್ನಿ ಸೇರಿ ಇಬ್ಬರು ಕೊಲೆಗೈದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಇಲ್ಲಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಎಡ್ವಿನ್ ಪತ್ನಿ ಬುಡ್ಡೋ ಹಾಗೂ ಪಕ್ಕದ ಮನೆಯ ಜಗದೀಶ್ ಎಂಬಾತನನ್ನು ಆಡುಗೋಡಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆ, ಕೊಲೆಯತ್ನ, ಸುಲಿಗೆ ಬೆದರಿಕೆ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಆಡುಗೋಡಿ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದ ಎಡ್ವಿನ್, 2015ರಿಂದ ಅಪರಾಧ ಕೃತ್ಯ ಬಿಟ್ಟು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು ಎಂದು ತಿಳಿದುಬಂದಿದೆ.
ತರಕಾರಿ ವ್ಯಾಪಾರಿಯಾಗಿದ್ದ ಬುಡ್ಡೋಳನ್ನು ವಿವಾಹವಾಗಿದ್ದ. ಕಳೆದ ಕೆಲ ತಿಂಗಳಿನಿಂದ ಚೆನ್ನೈನಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿದ್ದ ಎಡ್ವಿನ್ ಆಗಾಗ ಬಂದು ಪತ್ನಿಯ ಶೀಲದ ಮೇಲೆ ಅನುಮಾನ ಪಡುತ್ತಾ ಕಿರುಕುಳ ನೀಡಿ ದೌರ್ಜನ್ಯ ನಡೆಸುತ್ತಾ ಚೆನ್ನೈಗೆ ಬರುವಂತೆ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.
ಆದರೆ, ಮಕ್ಕಳನ್ನು ಶಾಲೆಗೆ ಸೇರಿಸಿದ್ದು ಬಿಟ್ಟು ಬರುವುದಿಲ್ಲ ಎಂದು ಪತ್ನಿ ಹೇಳುತ್ತಿದ್ದು ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ನಡೆಯುತ್ತಲೇ ಇತ್ತು. ಗುರುವಾರ ಚೆನ್ನೈನಿಂದ ಬಂದಿದ್ದ ಎಡ್ವಿನ್ ರಾತ್ರಿ 11:45ರ ವೇಳೆ ಮದ್ಯದ ಅಮಲಿನಲ್ಲಿ ಜಗಳ ತೆಗೆದು ಚೆನ್ನೈಗೆ ಬರುವಂತೆ ಪೀಡಿಸಿ ಜಗಳ ಮಾಡಿದ್ದಾನೆ. ಒಪ್ಪದಿದ್ದಾಗ ಚಾಕುನಿಂದ ಆಕೆಗೆ ಹಲ್ಲೆ ನಡೆಸಿದಾಗ ಆಕ್ರೋಶಗೊಂಡ ಪತ್ನಿ ಬುಡ್ಡೋ ಚಾಕು ಕಸಿದು, ಎಡ್ವಿನ್ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಪಕ್ಕದ ಮನೆಯ ಜಗದೀಶ್ ಎಂಬಾತ ಸಹಕರಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಆಡುಗೋಡಿ ಪೊಲೀಸರು, ಪತ್ನಿ ಬುಡ್ಡೋ ಹಾಗೂ ಜಗದೀಶ್‌ನನ್ನು ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದಾರೆ.







