ಮುಖ್ಯಮಂತ್ರಿ ವಿರುದ್ಧ ಸುಳ್ಳುಸುದ್ದಿ ಹಬ್ಬಿಸಿದ ಆರೋಪ: ಇಬ್ಬರ ಬಂಧನ

ಬೆಂಗಳೂರು, ಮೇ 3: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪತ್ನಿ, ನಟಿ ರಾಧಿಕಾ ಕುಮಾರಸ್ವಾಮಿ ಫೋಟೋವನ್ನು ಕೊಲಾಜ್ ಮಾಡಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದಡಿ ಇಬ್ಬರು ಯುವಕರನ್ನು ಇಲ್ಲಿನ ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಮೂಲದ ಚೌಕಿದಾರ್ ಅಜಿತ್ ಯಾನೆ ಅಜಿತ್ ಶೆಟ್ಟಿ ಹಾಗೂ ಬಾಗಲಕೋಟೆಯ ಗಂಗಾಧರ್ ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಗಾರ್ಮೆಂಟ್ಸ್‌ನಲ್ಲಿ ನೌಕರನಾದ ಗಂಗಾಧರ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಇತ್ತೀಚಿಗೆ ಉತ್ತರ ಕರ್ನಾಟಕ ಮೂಲದ ವೆಬ್‌ಸೈಟ್ ಒಂದರಲ್ಲಿ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.
ಏನಿದು ಪ್ರಕರಣ?: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕೃತಿ ಚಿಕಿತ್ಸೆಗಾಗಿ ಉಡುಪಿಯ ಕಾಪುಗೆ ಆಗಮಿಸಿದ ಕುರಿತು, ಎರಡು ದಿನಗಳ ಕಾಲ ಪ್ರಕೃತಿ ಚಿಕಿತ್ಸೆಗೆ ಮೊರೆ ಹೋದ ಸಿಎಂ ಕುಮಾರಸ್ವಾಮಿ ಎಂಬ ಶೀರ್ಷಿಕೆ ಅಡಿ ಸುದ್ದಿ ಪ್ರಕಟವಾಗಿತ್ತು.
ವೆಬ್‌ಸೈಟ್‌ನಲ್ಲಿ ಎ.24ರಂದು ಪ್ರಕಟವಾಗಿದ್ದ ಸುದ್ದಿಯಲ್ಲಿ ಕುಮಾರಸ್ವಾಮಿ ಮತ್ತು ರಾಧಿಕಾ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಭೇಟಿಯಾಗಿ, ಒಟ್ಟಿಗೆ ಇರುವ ಕೊಲಾಜ್ ಮಾಡಿದ ಫೋಟೋ ಇದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ದಿನೇಶ್ ಅವರು ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಲಾಗಿದೆ.







