ಬಿಬಿಎಂಪಿ ಎಇಇ ಕಚೇರಿಗೆ ಬೆಂಕಿ: ಮಹತ್ವದ ದಾಖಲೆಗಳು ಭಸ್ಮ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ.3: ಮಹದೇವಪುರ ವಲಯ ಬೆಳ್ಳಂದೂರು ಎಂಜಿನಿಯರಿಂಗ್ ವಿಭಾಗ ಕಚೇರಿಯಲ್ಲಿ ಶುಕ್ರವಾರ ಬೆಳ್ಳಂ ಬೆಳಗ್ಗೆ ಕಾಣಿಸಿಕೊಂಡ ಬೆಂಕಿಗೆ ಮಹತ್ವದ ದಾಖಲೆಗಳು, ಕಂಪ್ಯೂಟರ್, ಪೀಠೋಪಕರಣಗಳು ಸುಟ್ಟು ಹೋಗಿವೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಘಟನೆ ಹಿಂದೆ ಟಿಡಿಆರ್ ಮಾಫಿಯಾದ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಇತ್ತೀಚೆಗೆ ಎಸಿಬಿ ಬಲೆಗೆ ಬಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೃಷ್ಣಲಾಲ್ ಗರುಡಾಚಾರ್ ಪಾಳ್ಯದಲ್ಲಿ ಪಾಲಿಕೆಯ 150 ಮೀಟರ್ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ನಕಲಿ ದಾಖಲೆ ಮೂಲಕ 60 ಕೋಟಿ ರೂ.ಗಳಷ್ಟು ಟಿಡಿಆರ್ ನೀಡಿದ್ದರು. ಈ ಜಾಡು ಹಿಡಿದ ಎಸಿಬಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.
ನೂರಾರು ಕೋಟಿ ರೂ. ಟಿಡಿಆರ್ ಪ್ರಕರಣದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದ ಕೃಷ್ಣಲಾಲ್ ಬಗ್ಗೆ ತನಿಖೆ ನಡೆಸುತ್ತಿದ್ದ ಎಸಿಬಿ ತಂಡ ಪ್ರಮುಖ ದಾಖಲೆಗಳನ್ನು ಸಂಗ್ರಹಿಸಲು ವಿಶೇಷ ತಂಡ ರಚಿಸಿತ್ತು. ಈ ತಂಡ ಮಾಹಿತಿ ಸಂಗ್ರಹಿಸುತ್ತಿತ್ತು. ಈತನ ವಿರುದ್ಧ ಏನೇನು ಕ್ರಮ ಕೈಗೊಳ್ಳುತ್ತದೆ. ಯಾವ ಯಾವ ದಾಖಲೆಗಳನ್ನು ಸಂಗ್ರಹಿಸುತ್ತಿದೆ ಎಂಬ ಬಗ್ಗೆ ಈತನ ಆಪ್ತ, ಅಮಾನತು ಆಗಿರುವ ಬಿಬಿಎಂಪಿಯ ದ್ವಿತೀಯ ದರ್ಜೆ ಸಹಾಯಕ ಹನುಮಂತಯ್ಯ ಎಲ್ಲಾ ದಾಖಲೆಗಳ ಜೆರಾಕ್ಸ್ ಪ್ರತಿಯನ್ನು ಕೃಷ್ಣಲಾಲ್ ಗೆ ತಲುಪಿಸುತ್ತಿದ್ದ ಎನ್ನಲಾಗಿದ್ದು, ಈ ಸಂದರ್ಭದಲ್ಲೇ ಮಹದೇವಪುರ ವಲಯದ ಬೆಳ್ಳಂದೂರು ಎಂಜಿನಿಯರಿಂಗ್ ವಿಭಾಗದ ಕಚೇರಿಗೆ ಬೆಂಕಿ ಬಿದ್ದು, ದಾಖಲೆಗಳು ನಾಶವಾಗಿರುವುದಕ್ಕೆ ಸಾಕಷ್ಟು ಅನುಮಾನಗಳು ಉಂಟಾಗಿವೆ. ಈ ಕಚೇರಿಯಲ್ಲಿ ಟಿಡಿಆರ್ಗೆ ಸಂಬಂಧಿಸಿದ ದಾಖಲೆಗಳು ನಾಶವಾಗಿರುವ ಸಾಧ್ಯತೆ ಇದೆ.
ತನಿಖೆಗೆ ಆದೇಶ: ಬೆಳ್ಳಂದೂರು ಬಿಬಿಎಂಪಿ ಕಚೇರಿಗೆ ಬೆಂಕಿ ಬಿದ್ದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಮಹದೇವಪುರ ಜಂಟಿ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ವರದಿ ನೀಡಲಿದ್ದಾರೆ ಎಂದು ತಿಳಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ವರದಿಯ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬೆಂಕಿಗೆ ಹಲವು ಕಡತಗಳು ಸುಟ್ಟು ಭಸ್ಮವಾಗಿವೆ. ಕಚೇರಿಯಲ್ಲಿ ಟಿಡಿಆರ್ಗೆ ಸಂಬಂಧಿಸಿದ ದಾಖಲೆಗಳು ಸುಟ್ಟಿರಬಹುದು. ಯಾರಾದರೂ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರಾ? ಬೆಂಕಿ ಹೇಗೆ ಹೊತ್ತಿದೆ ಎಂಬ ಬಗ್ಗೆ ವರದಿ ಪಡೆಯುತ್ತೇನೆ. ಈಗಾಗಲೇ ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಹದೇವಪುರ ಜಂಟಿ ಆಯುಕ್ತರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.







