ಜೇನು ದಾಳಿ: ನಡುರಸ್ತೆಯಲ್ಲೇ ಶವ ಬಿಟ್ಟು ಓಡಿದ ಗ್ರಾಮಸ್ಥರು

ಮಂಡ್ಯ, ಮೇ 3: ಜೇನು ಹುಳು ದಾಳಿಯಿಂದಾಗಿ ಅಂತ್ಯಕ್ರಿಯೆಗೆ ಕೊಂಡೊಯ್ಯುತ್ತಿದ್ದ ಶವವನ್ನು ನಡುರಸ್ತೆಯಲ್ಲೇ ಬಿಟ್ಟು ಓಡಿಹೋದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಪೀಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ಉಂತೂರಮ್ಮ ದೇವಿಯ ಗುಡ್ಡಪ್ಪ ಬೋರಯ್ಯ ಅಲಿಯಾಸ್ ದೊಳ್ಳಯ್ಯ ಗುರುವಾರ ಸಂಜೆ ಮೃತಪಟ್ಟಿದ್ದು, ಶುಕ್ರವಾರ ಮಧ್ಯಾಹ್ನ ದೇವಾಲಯದ ಸಮೀಪದಲ್ಲೇ ಅಂತ್ಯ ಸಂಸ್ಕಾರ ಮಾಡಲು ಮೃತರ ದೇಹವನ್ನು ತೆಗೆದುಕೊಂಡು ಗ್ರಾಮಸ್ಥರು ತೆರಳಿದ್ದರು. ಮಾರ್ಗಮಧ್ಯೆ ದಿಢೀರನೆ ಜೇನು ಹುಳುಗಳು ದಾಳಿ ಮಾಡಿದ್ದು, ಇದರಿಂದ ಭೀತರಾದ ಜನರು ಶವವನ್ನು ಅಲ್ಲಿಯೇ ಬಿಟ್ಟು ಜೇನು ಹುಳು ದಾಳಿಯಿಂದ ತಪ್ಪಿಸಿಕೊಳ್ಳಲು ಮನೆಗಳತ್ತ ಓಡಿದರು.
ಜೇನು ಹುಳುಗಳು ಶವಬಿಟ್ಟು ಕದಲದೇ ಇರುವುದರಿಂದ ಯಾರೂ ಶವದ ಬಳಿ ತೆರಳುವ ಧೈರ್ಯ ಮಾಡಲಿಲ್ಲ. ಸಂಜೆಯಾದ ನಂತರ ಶವ ಸಂಸ್ಕಾರ ನಡೆಸಲಾಯಿತು.
ಜೇನು ದಾಳಿಯಿಂದ ಹಲವರು ಅಸ್ವಸ್ಥಗೊಂಡಿದ್ದು, ಸಮೀಪದ ಕೊಡಿಯಾಲ ಹಾಗೂ ಅರಕೆರೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
Next Story





