ಅಕ್ರಮ ಚಿನ್ನ ಸಾಗಾಟ: ವ್ಯಕ್ತಿಯ ಬಂಧನ, 1.19 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

ಬೆಂಗಳೂರು, ಮೇ 3: ಅಕ್ರಮವಾಗಿ ಚಿನ್ನ ಸಾಗಾಟ ಆರೋಪದಡಿ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು, ವ್ಯಕ್ತಿಯೋರ್ವನಿಂದ 1.19 ಲಕ್ಷ ರೂ. ಮೌಲ್ಯದ 3.678 ಕೆ.ಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಚಾಮರಾಜನಗರ ಮೂಲದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ವ್ಯಕ್ತಿಯೋರ್ವ, ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದಾಗ, ಬೆಂಚ್ ವೈಸ್ ಎಂಬ ಕಬ್ಬಿಣದ ಸಾಧನದಲ್ಲಿ ಚಿನ್ನ ಅಡಗಿಸಿಟ್ಟಿದ್ದ ಎನ್ನಲಾಗಿದ್ದು, ವಿಮಾನ ನಿಲ್ದಾಣದಲ್ಲಿ ಈತನ ಚಲನವಲನದ ಬಗ್ಗೆ ಅನುಮಾನಗೊಂಡ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಈ ವೇಳೆ ಚಿನ್ನ ಸಾಗಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಚಿನ್ನಾಭರಣಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಆರೋಪಿಯ ವಿಚಾರಣೆ ಮುಂದುವರೆಸಿದ್ದಾರೆ.
Next Story





