ಸಚಿವ ಎಂ.ಬಿ.ಪಾಟೀಲ್ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿ ಆರೋಪ: ಮಹೇಶ್ ವಿಕ್ರಂ ಹೆಗ್ಡೆ-ಚನ್ನೇಗೌಡಗೆ ಜಾಮೀನು

ಮಹೇಶ್ ವಿಕ್ರಂ ಹೆಗ್ಡೆ
ಬೆಂಗಳೂರು, ಮೇ 3: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳಾದ ಮಹೇಶ್ ವಿಕ್ರಂ ಹೆಗ್ಡೆ ಹಾಗೂ ಪತ್ರಕರ್ತ ಚನ್ನೇಗೌಡ ಅವರಿಗೆ ಜನಪ್ರತಿನಿಧಿಗಳ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರು ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದರು. ನ್ಯಾಯಪೀಠವು ಆರೋಪಿ ಪೋಸ್ಟ್ ಕಾರ್ಡ್ ವೆಬ್ ಪೋರ್ಟಲ್ ಸಂಪಾದಕ ಮಹೇಶ್ ವಿಕ್ರಂ ಹೆಗ್ಡೆ ಹಾಗೂ ಪತ್ರಕರ್ತ ಚನ್ನೇಗೌಡ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಪ್ರಕರಣವೇನು: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ಎಂ.ಬಿ.ಪಾಟೀಲ್ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬಿಎಲ್ಡಿಇ ಸಂಸ್ಥೆಯ ಲೆಟರ್ಹೆಡ್ನಲ್ಲಿ ಬರೆದಿದ್ದರು ಎನ್ನಲಾದ ನಕಲಿ ಪತ್ರವನ್ನು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಯೊಂದರಲ್ಲಿ ಪ್ರಕಟ ಮಾಡಲಾಗಿತ್ತು.
ಈ ಕುರಿತು ಎಂ.ಬಿ.ಪಾಟೀಲ್ರು ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ತನಿಖೆಯನ್ನು ಸಿಐಡಿ ಪೊಲೀಸರು ನಡೆಸುತ್ತಿದ್ದು ಪೊಲೀಸರು ಪೋಸ್ಟ್ ಕಾರ್ಡ್ ವೆಬ್ ಪೋರ್ಟಲ್ ಸಂಪಾದಕ ಮಹೇಶ್ ವಿಕ್ರಂ ಹೆಗ್ಡೆಯನ್ನು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಹೆಗ್ಡೆ ನೀಡಿದ ಮಾಹಿತಿಯ ಆಧಾರದಲ್ಲಿ ಸಿಐಡಿ ಪೊಲೀಸರು ಎಸ್.ಎ.ಹೇಮಂತ್ಕುಮಾರ್ ಅವರನ್ನು ವಶಕ್ಕೆ ಪಡೆದಿದ್ದರು. ಹೇಮಂತಕುಮಾರ್ ಅವರಿಗೆ ಗುರುವಾರ ನ್ಯಾಯಪೀಠವು ಜಾಮೀನು ಮಂಜೂರು ಮಾಡಿತ್ತು. ಶುಕ್ರವಾರ ಮಹೇಶ್ ವಿಕ್ರಂ ಹೆಗ್ಡೆ ಹಾಗೂ ಚನ್ನೇಗೌಡ ಅವರಿಗೆ ಜಾಮೀನು ಮಂಜೂರು ಮಾಡಿತು.







