ಎರಿಕ್ಸನ್ ಪ್ರಕರಣ: ಸುಪ್ರೀಂಕೋರ್ಟ್ ಆದೇಶ ತಿರುಚಿದ್ದ ಆರೋಪಿಗೆ ಜಾಮೀನು

ಹೊಸದಿಲ್ಲಿ,ಎ.4: ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ವಿರುದ್ಧ ಎರಿಕ್ಸನ್ ಸಂಸ್ಥೆಯು ಹೂಡಿದ ನ್ಯಾಯಾಲಯ ನಿಂದನೆ ಮೊಕದ್ದಮೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ತಿರುಚಿದ್ದ ಆರೋಪದಲ್ಲಿ ಕ್ರೈಂ ಬ್ರಾಂಚ್ ಪೊಲೀಸರಿಂದ ಬಂಧಿತರಾಗಿರುವ ಮಾಜಿ ಕೋರ್ಟ್ ಉದ್ಯೋಗಿ ತಪನ್ ಚಕ್ರವರ್ತಿ ಅವರಿಗೆ ಹೊಸದಿಲ್ಲಿಯ ಪಾಟಿಯಾಲ ನ್ಯಾಯಾಲಯ ಶುಕ್ರವಾರ ಜಾಮೀನು ಬಿಡುಗಡೆ ನೀಡಿದೆ.
ಚಕ್ರವರ್ತಿ ಹಾಗೂ ಇನ್ನೋರ್ವ ನ್ಯಾಯಾಲಯ ಉದ್ಯೋಗಿ ಮಾನವಶರ್ಮಾ ಅವರನ್ನು ಏಪ್ರಿಲ್ 7ರಂದು ಬಂಧಿಸಲಾಗಿತ್ತು. ದಿಲ್ಲಿಯ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಮನೀಶ್ ಖುರಾನಾ ಅವರು ಎಪ್ರಿಲ್ 18ರಂದು ಚಕ್ರವರ್ತಿ ಅವರ ಜಾಮೀನು ಮನವಿಯನ್ನು ತಿರಸ್ಕರಿಸಿದ್ದರು ಹಾಗೂ ಆತನಿಗೆ ನ್ಯಾಯಾಂಗ ಕಸ್ಟಡಿ ವಿಧಿಸಿದ್ದರು.
ಬಂಧನವಾದಾಗಿನಿಂದ ಚಕ್ರವರ್ತಿಯು ಕಸ್ಟಡಿಯಲ್ಲಿದ್ದು, ಆತನನ್ನು ವ್ಯಾಪಕವಾಗಿ ವಿಚಾರಣೆಗೊಳಪಡಿಸಲಾಗಿದೆ. ಆತ ಈಗಾಗಲೇ ಸುಪ್ರೀಂಕೋರ್ಟ್‌ನ ಸೇವೆಯಿಂದ ವಜಾಗೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧನದಲ್ಲಿರಿಸುವುದರಲ್ಲಿ ಯಾವುದೇ ಉದ್ದೇಶ ಈಡೇರಲಾರದು’’ಎಂದು ನ್ಯಾಯಾಧೀಶ ಎಂ.ಕೆ. ಅಗರ್‌ವಾಲ್ ತಿಳಿಸಿದರು.
ಜಾಮೀನು ಬಿಡುಗಡೆಗೆ ಪ್ರತಿಯಾಗಿ 50 ಸಾವಿರ ರೂ.ಗಳ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಖಾತರಿಹಣವನ್ನು ನೀಡುವಂತೆಯೂ ನ್ಯಾಯಾಧೀಶರು ಚಕ್ರವರ್ತಿಗೆ ಆದೇಶಿಸಿದರು.







