ಸ್ಪೇನ್ ಆಟಗಾರ ಹೆರ್ಡಾಂಡೆಝ್ ಫುಟ್ಬಾಲ್ ಗೆ ವಿದಾಯ

ಬಾರ್ಸಿಲೋನ, ಮೇ 3: ಬಾರ್ಸಿಲೋನ ಹಾಗೂ ಸ್ಪೇನ್ ಮಿಡ್ ಫೀಲ್ಡರ್ ಕ್ಸಾವಿ ಹೆರ್ಡಾಂಡೆಝ್ ಈ ಋತುವಿನ ಅಂತ್ಯಕ್ಕೆ ತನ್ನ ಎರಡು ದಶಕಗಳ ಫುಟ್ಬಾಲ್ ವೃತ್ತಿಜೀವನಕ್ಕೆ ವಿದಾಯ ಹೇಳಲಿದ್ದು, ಕೋಚಿಂಗ್ ನೀಡುವತ್ತ ಗಮನ ಹರಿಸಲಿದ್ದಾರೆ.
ಬಾರ್ಸಿಲೋನ ಪರ 767 ಪಂದ್ಯಗಳು ಹಾಗೂ ಸ್ಪೇನ್ ಪರ 133 ಪಂದ್ಯಗಳನ್ನಾಡಿರುವ ಹೆರ್ಡಾಂಡೆಝ್ ಗುರುವಾರ ಸ್ಪೇನ್‌ನ ಮಾಧ್ಯಮ ಸದಸ್ಯರಿಗೆ ಬಹಿರಂಗ ಪತ್ರವನ್ನು ಬರೆಯುವ ಮೂಲಕ ತನ್ನ ನಿವೃತ್ತಿಯ ಯೋಜನೆಯನ್ನು ಖಚಿತಪಡಿಸಿದ್ದಾರೆ.
‘‘ಆಟಗಾರನಾಗಿ ಇದು ನನ್ನ ಕೊನೆಯ ವರ್ಷ. ಕೋಚ್ ಆಗಿ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇನೆ. 39ನೇ ವಯಸ್ಸಿನ ತನಕ ಫುಟ್ಬಾಲ್ ಆಡುವ ಭಾಗ್ಯ ಲಭಿಸಿತ್ತು. ಎಮಿರ್ ಕಪ್‌ನ್ನು ಗೆಲ್ಲುವ ಮೂಲಕ ಈ ಋತುವನ್ನು ಸಕಾರಾತ್ಮಕವಾಗಿ ಕೊನೆಗೊಳಿಸಲು ಬಯಸಿರುವೆ’’ ಎಂದು ಹೆರ್ಡಾಂಡೆಝ್ ಹೇಳಿದ್ದಾರೆ.
ಹೆರ್ಡಾಂಡೆಝ್ 1998ರಲ್ಲಿ ಬಾರ್ಸಿಲೋನ ಕ್ಲಬ್‌ನಲ್ಲಿ ಪಾದರ್ಪಣೆ ಪಂದ್ಯ ಆಡಿದ್ದರು. ಬಹುಬೇಗನೆ ತಂಡದ ಪ್ರಮುಖ ಮಿಡ್ ಫೀಲ್ಡರ್ ಆಗಿ ರೂಪುಗೊಂಡಿದ್ದರು. ಬಾರ್ಸಿಲೋನ ಪರ 8 ಲಾ ಲಿಗ ಪ್ರಶಸ್ತಿಗಳು ಹಾಗೂ ನಾಲ್ಕು ಚಾಂಪಿಯನ್ಸ್ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಸ್ಪೇನ್ ತಂಡ 2010ರಲ್ಲಿ ಮೊದಲ ಹಾಗೂ ಏಕೈಕ ವಿಶ್ವಕಪ್ ಗೆದ್ದಾಗ ಹೆರ್ಡಾಂಡೆಝ್ ತಂಡದ ಪ್ರಮುಖ ಆಟಗಾರನಾಗಿದ್ದರು. 2008 ಹಾಗೂ 2012ರಲ್ಲಿ ಸ್ಪೇನ್ ತಂಡ ಯುರೋ ಚಾಂಪಿಯನ್‌ಶಿಪ್ ಜಯಿಸಲು ನೆರವಾಗಿದ್ದ ಹೆರ್ಡಾಂಡೆಝ್ 2014ರಲ್ಲಿ ಸ್ಪೇನ್ ತಂಡ ವಿಶ್ವಕಪ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಬಳಿಕ ರಾಷ್ಟ್ರೀಯ ತಂಡದಿಂದ ನಿವೃತ್ತಿ ಪಡೆದಿದ್ದರು. ಪ್ರಸ್ತುತ ಅಲ್ ಸಾದ್ ತಂಡವನ್ನು ಪ್ರತಿನಿಧಿಸುತ್ತಿರುವ ಹೆರ್ಡಾಂಡೆಝ್ ಅಲ್ ಸಾದ್ ತಂಡ ತನ್ನ ದೇಶದ ಉತ್ತಮ ಪ್ರಶಸ್ತಿ ಖತರ್ ಸ್ಟಾರ್ಸ್ ಲೀಗ್ ಜಯಿಸಲು ನೆರವಾಗಿದ್ದರು.







