ರಾಜಸ್ಥಾನ ನಾಯಕನಾಗಿ ರಹಾನೆ ಮರು ನೇಮಕ

ಹೊಸದಿಲ್ಲಿ, ಮೇ 3: ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ ಸ್ವದೇಶಕ್ಕೆ ವಾಪಸಾದ ಕಾರಣ ಅಜಿಂಕ್ಯ ರಹಾನೆ ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ತಂಡದ ನಾಯಕನಾಗಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.
ರಾಜಸ್ಥಾನ ತಂಡ ಟೂರ್ನಿಯಲ್ಲಿ ಆಡಿದ ಮೊದಲ 8 ಪಂದ್ಯಗಳ ಪೈಕಿ ಆರರಲ್ಲಿ ಸೋತು ನಿರಾಶಾದಾಯಕ ಪ್ರದರ್ಶನ ನೀಡಿದ ವೇಳೆ ರಹಾನೆಯ ಬದಲಿಗೆ ಸ್ಮಿತ್‌ರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿತ್ತು. ಇದೀಗ ಮತ್ತೆ ನಾಯಕನ ಸ್ಥಾನವನ್ನು ಅಲಂಕರಿಸಿರುವ ರಹಾನೆ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದ ವೇಳೆ ರಾಯಲ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಸ್ಮಿತ್ ನಾಯಕತ್ವದಲ್ಲಿ ರಾಯಲ್ಸ್ ತಂಡ ಕಳೆದ 4 ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿತ್ತು. ರಾಯಲ್ಸ್ ಪ್ಲೇ-ಆಫ್‌ಗೆ ತಲುಪುವ ಅಲ್ಪ ವಿಶ್ವಾಸ ಮೂಡಿತ್ತು. ಸ್ಮಿತ್ ಸ್ವದೇಶಕ್ಕೆ ವಾಪಸಾಗಿದ್ದು ಮೇ 30 ರಂದು ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಆಸ್ಟ್ರೇಲಿಯ ತಂಡವನ್ನು ಸೇರಿಕೊಳ್ಳಲಿದ್ದಾರೆ.
‘‘ತಂಡದ ನಾಯಕತ್ವದ ಚುಕ್ಕಾಣಿ ಹಿಡಿಯುವಂತೆ ಅಜಿಂಕ್ಯಗೆ ನಾವು ವಿನಂತಿಸಿಕೊಂಡಿದ್ದೇವೆ. ಅವರು ಧೈರ್ಯದಿಂದ ತಂಡದ ನಾಯಕತ್ವ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಮುಂದಾಗಿದ್ದಾರೆ. ಅವರಂತಹ ಆಟಗಾರ ನಮ್ಮ ತಂಡದಲ್ಲಿರುವುದು ಸಂತೋಷದ ವಿಚಾರ’’ ಎಂದು ರಾಜಸ್ಥಾನ ತಂಡದ ಮುಖ್ಯಸ್ಥ ಝುಬಿನ್ ಭರೂಚ ಹೇಳಿದ್ದಾರೆ.







