ನಮ್ಮ ಸೇನೆ ನರೇಂದ್ರ ಮೋದಿ ಅವರ ಆಸ್ತಿಯಲ್ಲ: ರಾಹುಲ್ ಗಾಂಧಿ

ಹೊಸದಿಲ್ಲಿ, ಮೇ 4: ಯುಪಿಎ ಅವಧಿಯಲ್ಲಿ ನಡೆದಿರುವ ಸರ್ಜಿಕಲ್ ದಾಳಿಯನ್ನು ವಿಡಿಯೋ ಗೇಮ್ನೊಂದಿಗೆ ಹೋಲಿಕೆ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ‘‘ಭಾರತೀಯ ಸೇನೆ ಮೋದಿ ಅವರ ವೈಯಕ್ತಿಕ ಆಸ್ತಿಯಲ್ಲ. ಅದು ನಮ್ಮೆಲ್ಲರ ಆಸ್ತಿ'' ಎಂದಿದ್ದಾರೆ.
‘‘ಭೂಸೇನೆ, ವಾಯುಸೇನೆ ಅಥವಾ ನೌಕಾ ಸೇನೆ ನರೇಂದ್ರ ಮೋದಿ ಅವರು ಯೋಚಿಸಿದಂತೆ ಅವರ ಆಸ್ತಿಯಲ್ಲ. ಯುಪಿಎ ಅವಧಿಯಲ್ಲಿ ನಡೆದಿರುವ ಸರ್ಜಿಕಲ್ ಸ್ಟ್ರೈಕ್ನ್ನು ವಿಡಿಯೋ ಗೇಮ್ಗೆ ಹೋಲಿಸಿರುವ ಮೋದಿ ಕಾಂಗ್ರೆಸ್ಗೆ ಮಾತ್ರವಲ್ಲ ಸೇನೆಗೂ ಅವಮಾನಿಸಿದ್ದಾರೆ’’ ಎಂದು ಶನಿವಾರ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘‘ಪ್ರಧಾನಿ ವಿರುದ್ಧ ‘ಚೋಕಿದಾರ್ ಚೋರ್ ಹೇ’ ಸ್ಲೋಗನ್ ಮುಂದುವರಿಯಲಿದೆ. ನನ್ನ ಹೇಳಿಕೆ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಕ್ಷಮೆ ಕೋರಿದ್ದೇನೆ. ಬಿಜೆಪಿ ಅಥವಾ ಮೋದಿಜಿ ಬಳಿ ಕ್ಷಮೆ ಕೋರುವುದಿಲ್ಲ’’ ಎಂದರು.
ಕೇಂದ್ರ ಚುನಾವಣಾ ಆಯೋಗ ವಿಪಕ್ಷಗಳ ಬಗ್ಗೆ ಸಂಪೂರ್ಣ ಪಕ್ಷಪಾತ ಧೋರಣೆ ತಾಳುತ್ತಿದೆ. ಸಾಂವಿಧಾನಿಕ ಸಂಸ್ಥೆ ತನ್ನ ಜವಾಬ್ದಾರಿ ನಿಭಾಯಿಸಲಿ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ವಿಚಾರದಲ್ಲಿ ಚುನಾವಣಾ ಆಯೋಗದ ನಿಲುವು ಭಿನ್ನವಾಗಿರುತ್ತದೆ ಎಂದು ಆರೋಪಿಸಿದರು.
ನಾಲ್ಕು ಹಂತಗಳ ಚುನಾವಣೆಗಳ ಬಳಿಕ ಕಾಂಗ್ರೆಸ್ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸೋಲುವುದು ಖಚಿತವಾಗಿದೆ. ಮೋದಿ ಸರಕಾರ ಭಾರತದ ಆರ್ಥಿಕ ಸ್ಥಿತಿಯನ್ನು ಸರ್ವನಾಶ ಮಾಡಿದೆ. ಪ್ರಧಾನಿ ಉದ್ಯೋಗ ಹಾಗೂ ರೈತರ ಕುರಿತು ಒಂದೂ ಶಬ್ದವನ್ನು ಆಡುತ್ತಿಲ್ಲ. ಈ ಹಿಂದಿನ ಚುನಾವಣೆಯಲ್ಲಿ ನೀಡಿರುವ 2 ಕೋಟಿ ಉದ್ಯೋಗದ ಬಗ್ಗೆ ದೇಶದ ಜನರು ಪ್ರಧಾನಿಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.