ವಾಲ್‌ಮಾರ್ಕ್ ಕಂಪೆನಿಯ ಪ್ರಮುಖರ ಮನೆ, ಕಚೇರಿ ಸೇರಿ ಹಲವು ಕಡೆ ಎಸಿಬಿ ದಾಳಿ

ಬೆಂಗಳೂರು, ಮೇ 4: ಟಿಡಿಆರ್ ಹಗರಣ ವಿಚಾರಣೆ ತೀವ್ರಗೊಳಿಸಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ತನಿಖಾಧಿಕಾರಿಗಳು ಪ್ರತಿಷ್ಠಿತ ವಾಲ್‌ಮಾರ್ಕ್ ಖಾಸಗಿ ಕಂಪೆನಿಯ ಪ್ರಮುಖರ ಮನೆ ಮತ್ತು ಕಚೇರಿ ಸೇರಿದಂತೆ 5 ಕಡೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದೆ.
ಶನಿವಾರ ಎಸಿಬಿ ಎಸ್ಪಿ ಸಂಜೀವ್ ಪಾಟೀಲ್ ಮಾರ್ಗದರ್ಶನ, ಡಿವೈಎಸ್ಪಿ ರವಿಕುಮಾರ್ ನೇತತ್ವದಲ್ಲಿ 5 ತಂಡಗಳ ಎಸಿಬಿ ಅಧಿಕಾರಿಗಳು, ವಾಲ್‌ಮಾರ್ಕ್ನ ಕಂಪೆನಿಯ ನಿರ್ದೇಶಕ ರತನ್ ಬಾಬುಲಾಲ್ ಲಾಥ್, ಅವರ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಎನ್‌ಕ್ಲೈವ್ ಫ್ಲಾಟ್, ರೆಸಿಡೆನ್ಸಿ ರಸ್ತೆಯಲ್ಲಿರುವ ಅವರ ಕಚೇರಿ ಹಾಗೂ ಇದೇ ಕಂಪೆನಿಯ ನೌಕರ ಅಮಿತ್ ಬೋಳಾರ್ ಅವರ ಇಂದಿರಾನಗರದಲ್ಲಿರುವ ಮನೆ, ಗುತ್ತಿಗೆದಾರರದಾದ ಮುನಿರಾಜು ಹಾಗೂ ಗೌತಮ್ ಅವರ ಮನೆಗಳ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ಪತ್ತೆ ಹಚ್ಚಿದ್ದಾರೆ.
ಈ ವೇಳೆ ಎಲ್ಲ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಟಿಡಿಆರ್ ಹಗರಣದಲ್ಲಿ ಈವರೆಗೂ ಸುಮಾರು 8 ಮಂದಿ ಆರೋಪಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ. ಎಲ್ಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಬಿಬಿಎಂಪಿ ಇಂಜಿನಿಯರ್ ಆಗಿದ್ದ ಪ್ರಮುಖ ಆರೋಪಿ ಕೃಷ್ಣಲಾಲ್ ಅಕ್ರಮವಾಗಿ ನೀಡುತ್ತಿದ್ದ ಟಿಡಿಆರ್ ಅನ್ನು ವಾಲ್‌ಮಾರ್ಕ್ ಕಂಪೆನಿ ಮೂಲಕ ಪರಭಾರೆ ಮಾಡಲಾಗುತ್ತಿದ್ದು, ಬಹಳಷ್ಟು ಬಿಲ್ಡರ್‌ಗಳಿಗೆ, ರಿಯಲ್ ಎಸ್ಟೇಟ್ ಕಂಪೆನಿಗಳಿಗೆ ಟಿಡಿಆರ್ ಅನ್ನು ಹತ್ತಾರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ದಾಳಿಯ ವೇಳೆ ಹಲವಾರು ದಾಖಲಾತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸಿಬಿ ತಿಳಿಸಿದೆ.
ಈ ಹಿಂದೆ ದಾಳಿ: ಬಿಬಿಎಂಪಿ ವ್ಯಾಪ್ತಿಯ ರಸ್ತೆಯೊಂದರ ಅಗಲೀಕರಣದ ಟಿಡಿಆರ್‌ನಲ್ಲಿ ಭಾರೀ ಹಗರಣ ನಡೆದಿದೆ ಎಂದು ದೂರು ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಸಿಸಿಬಿ ಪೊಲೀಸರು ಬಿಡಿಎ ಸಹಾಯಕ ಇಂಜಿನಿಯರ್ ಕೃಷ್ಣಲಾಲ್ ಅವರ ಆಪ್ತರಾದ ದೀಪಕ್‌ಕುಮಾರ್, ಅಮಿತ್ ರಿಕಬ್ ಚಂದ್ ಜೈನ್ ಎಂಬುವರ ಮನೆ ಮೇಲೆ ಈಗಾಗಲೇ ದಾಳಿ ನಡೆಸಿದ್ದರು.







