ನಿಮ್ಮ ‘ದೃಷ್ಟಿ’ಯ ಮೇಲೊಂದು ಕಣ್ಣಿರಲಿ
ಕಣ್ಣಿನ ಸಮಸ್ಯೆಗಳನ್ನೆಂದಿಗೂ ಕಡೆಗಣಿಸದಿರಿ ನಮ್ಮ ಕಣ್ಣು ಕ್ಯಾಮೆರಾದಂತೆ ಕಾರ್ಯ ನಿರ್ವಹಿಸುತ್ತದೆ ಮತ್ತು ರೆಟಿನಾ ಅಥವಾ ಅಕ್ಷಿಪಟಲವು ಫಿಲ್ಮ್‌ನಂತೆ ವರ್ತಿಸುತ್ತದೆ ಎಂದು ಶಾಲೆಗಳಲ್ಲಿ ಕಲಿಸಿದ್ದನ್ನು ನೆನಪು ಮಾಡಿಕೊಳ್ಳಿ. ರೆಟಿನಾ ಬೆಳಕಿಗೆ ಸಂವೇದಿಸುವ ಅಂಗಾಂಶವಾಗಿದೆ ಹಾಗೂ ಅದು ಒಳಬರುವ ಬೆಳಕಿಗೆ ಪ್ರತಿಕ್ರಿಯಿಸುತ್ತದೆ ಮತ್ತು ದ್ಯುತಿ ನರದ ಮೂಲಕ ಮಿದುಳಿಗೆ ಚಿತ್ರವನ್ನು ರವಾನಿಸುತ್ತದೆ.
ರೆಟಿನಾದಲ್ಲಿ ಯಾವುದೇ ಸಮಸ್ಯೆಯುಂಟಾದರೆ ಅದು ಮೂಡಿರುವ ಚಿತ್ರವನ್ನು ವ್ಯತ್ಯಯಗೊಳಿಸುತ್ತದೆ. ಹೀಗಾಗಿ ಕಪ್ಪು ಬಿಂದುಗಳು,ಬೆಳಕಿನ ಮಿಂಚು ಅಥವಾ ಮಸುಕಾದ ದೃಷ್ಟಿಗಳಿಂದ ಪಾರಾಗಲು ನಾವು ನಮ್ಮ ಕಣ್ಣುಗಳನ್ನು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗುತ್ತದೆ. ಈ ಸಮಸ್ಯೆಗಳು ಡಯಾಬಿಟಿಕ್ ರೆಟಿನೊಪತಿ, ರೆಟಿನಾ ಪ್ರತ್ಯೇಕತೆ ಅಥವಾ ಛಿದ್ರ ರೆಟಿನಾದಂತಹ ಕಣ್ಣಿನ ರೋಗಗಳನ್ನು ಸೂಚಿಸಬಹುದು.
ಇಂತಹ ಲಕ್ಷಣಗಳು ಅನುಭವವಾದರೆ ಅವುಗಳನ್ನು ಕಡೆಗಣಿಸಬಾರದು. ಇವು ಗಂಭೀರ ನೇತ್ರರೋಗಗಳ ಲಕ್ಷಣಗಳಾಗಿರಬಹುದು. ಕಣ್ಣುಗಳ ಆರೋಗ್ಯವನ್ನು ಕಾಯ್ದುಕೊಳ್ಳಲು ಯಾವಾಗ ನೀವು ನೇತ್ರತಜ್ಞರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ ಎನ್ನುವುದು ನಿಮಗೆ ಗೊತ್ತಿರಬೇಕು.
►ನೀವು ಮಧುಮೇಹಿಯಾಗಿದ್ದರೆ
ಮಧುಮೇಹದಿಂದ ಬಳಲುತ್ತಿರುವವರು ಕಣ್ಣಿನ ಪೊರೆ,ಗ್ಲಾಕೋಮಾ ಮತ್ತು ಡಯಾಬಿಟಿಕ್ ರೆಟಿನೊಪತಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಶರೀರದಲ್ಲಿಯ ಅನಿಯಮಿತ ಸಕ್ಕರೆ ಮಟ್ಟಗಳು ರೆಟಿನೊಪತಿಗೆ ಕಾರಣವಾಗುತ್ತವೆ ಮತ್ತು ಇದು ಕಣ್ಣುಗಳಲ್ಲಿನ ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಇಂತಹ ಸ್ಥಿತಿಯಲ್ಲಿ ಈ ರಕ್ತನಾಳಗಳಿಂದ ರಕ್ತ ಸೋರಿಕೆಯಾಗಬಹುದು ಮತ್ತು ದುರ್ಬಲ,ಬ್ರಷ್‌ಗಳಂತಹ ಕವಲುಗಳು ಬೆಳೆಯಬಹುದು ಮತ್ತು ಅಂಗಾಂಶದಲ್ಲಿ ಗಾಯದ ಗುರುತುಗಳುಂಟಾಗಬಹುದು. ಇದರಿಂದಾಗಿ ದೃಷ್ಟಿಯು ಮಸುಕಾಗುತ್ತದೆ ಅಥವಾ ಕ್ಷೀಣಿಸುತ್ತದೆ.
ಮಧುಮೇಹ ಸಂಬಂಧಿ ಣ್ಣಿನ ಸಮಸ್ಯೆಗಳು ಇಂದು ವಿಶ್ವಾದ್ಯಂತ ಅಂಧತ್ವಕ್ಕೆ ಪ್ರಮುಖ ಕಾರಣವಾಗಿವೆ. ಮಧುಮೇಹಿಗಳು ತಮ್ಮ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಇತರರಿಗೆ ಹೋಲಿಸಿದರೆ ಅಂಧತ್ವಕ್ಕೆ ಗುರಿಯಾಗುವ ಸಾಧ್ಯತೆಯು ಹೆಚ್ಚಾಗಿರುತ್ತದೆ.
►ನೀವು ಸಮೀಪ ದೃಷ್ಟಿ ಹೊಂದಿದ್ದರೆ
ಸಮೀಪ ದೃಷ್ಟಿಯನ್ನು ಹೊಂದಿರುವುದು ರೆಟಿನಾ ಬೇರ್ಪಡುವಿಕೆಯ ಅತ್ಯಂತ ಹೆಚ್ಚಿನ ಅಪಾಯದ ಅಂಶವಾಗಿದೆ. ಅಕ್ಷಿಪಟಲದ ಅಂಗಾಂಶಗಳು ರಕ್ತನಾಳಗಳ ಪದರದಿಂದ ಪ್ರತ್ಯೇಕಗೊಳ್ಳುವುದನ್ನು ರೆಟಿನಾ ಬೇರ್ಪಡುವಿಕೆ ಎನ್ನಲಾಗುತ್ತದೆ. ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಒದಗಿಸುವುದು ಈ ರಕ್ತನಾಳಗಳ ಕಾರ್ಯವಾಗಿದೆ. ಜೀವಕೋಶಗಳಲ್ಲಿ ಆಮ್ಲಜನಕದ ಕೊರತೆಯು ಮಸುಕಾದ ದೃಷ್ಟಿಯನ್ನುಂಟು ಮಾಡುತ್ತದೆ.
ಆರಂಭಿಕ ಹಂತದ ರೆಟಿನಾ ಬೇರ್ಪಡುವಿಕೆಯನ್ನು ನಿರ್ಬಂಧಿಸಬಹುದಾದರೂ ಸುದೀರ್ಘ ಕಾಲದವರೆಗೆ ಚಿಕಿತ್ಸೆ ಪಡೆಯದಿದ್ದರೆ ಅದು ಪೀಡಿತ ಕಣ್ಣಿನಲ್ಲಿ ಅಂಧತ್ವವನ್ನುಂಟು ಮಾಡಬಹುದು. ತಲೆ ಅಥವಾ ಕಣ್ಣಿಗೆ ತೀವ್ರ ಏಟು ಬಿದ್ದಾಗಲೂ ರೆಟಿನಾ ಬೇರ್ಪಡುವಿಕೆ ಉಂಟಾಗುತ್ತದೆ. ಹಿರಿಯರಲ್ಲಿ ಮತ್ತು ಮಧ್ಯವಯಸ್ಕರಲ್ಲಿ ಈ ಸಮಸ್ಯೆಗಳು ಆಗಾಗ್ಗೆ ಕಾಣಿಸಿಕೊಳ್ಳ್ಳುತ್ತವೆ.
►ಸಣ್ಣ ಮಗುವಿದ್ದರೆ
ಆರು ವರ್ಷದೊಳಗಿನ ಪ್ರಾಯದ ಮಕ್ಕಳು ರೆಟಿನೊಬ್ಲಾಸ್ಟೋಮಾಗೆ ಗುರಿಯಾಗಬಹುದು. ಇದು ಅತ್ಯಂತ ತ್ವರಿತವಾಗಿ ಬೆಳೆಯುವ ಅತ್ಯಂತ ಸಾಮಾನ್ಯ ವಿಧದ ರೆಟಿನಾ ಕ್ಯಾನ್ಸರ್ ಆಗಿದೆ. ಇದು ಆನುವಂಶಿಕವಾಗಿರಬಹುದು ಅಥವಾ ಇಲ್ಲದಿರಬಹುದು ಮತ್ತು ಒಂದು ಕಣ್ಣಿನಲ್ಲಿ ಅಥವಾ ಎರಡೂ ಕಣ್ಣುಗಳಲ್ಲಿ ಕಾಣಿಸಿಕೊಳ್ಳಬಹುದು. ಅಪರೂಪದ ಪ್ರಕರಣಗಳಲ್ಲಿ ಮಕ್ಕಳ ಎರಡು ಕಣ್ಣುಗಳ ಜೊತೆಗೆ ಪೀನಲ್ ಗ್ರಂಥಿಯೂ ಬಾಧೆಗೊಳಗಾಗಬಹುದು. ನಿಮ್ಮ ಮಗುವಿನ ಕಣ್ಣುಗೊಂಬೆಯಲ್ಲಿ ಬಿಳಿಯ ಬಿಂದುಗಳು ಕಂಡುಬಂದರೆ,ಕಣ್ಣುಗಳು ಕೆಂಪಗಾಗಿ ನೋಯುತ್ತಿದ್ದರೆ ಮಗುವನ್ನು ನೀವು ತಕ್ಷಣ ಅಸತ್ರೆಗೆ ಕರೆದೊಯ್ಯಬೇಕಾಗುತ್ತದೆ.ಮೆಳ್ಳೆಗಣ್ಣುಗಳನ್ನು ಹೊಂದಿರುವ ಮಕ್ಕಳು ಈ ಅಪಾಯಕ್ಕೆ ಗುರಿಯಾಗುವ ಸಾಧ್ಯತೆಗಳಿರುವದರಿಂದ ನೀವು ನಿಯಮಿತವಾಗಿ ಅವರ ಕಣ್ಣುಗಳ ತಪಾಸಣೆ ಮಾಡಿಸಬೇಕಾಗುತ್ತದೆ. ಚಿಕಿತ್ಸೆ ಪಡೆಯದಿದ್ದರೆ ಟ್ಯೂಮರ್ ಮಗುವಿನ ಶ್ವಾಸಕೋಶ,ಮಿದುಳು ಮತ್ತು ಮೂಳೆಗಳಿಗೆ ಹರಡುತ್ತದೆ. ಮಗು ಶಾಶ್ವತವಾಗಿ ಕಣ್ಣುಗಳನ್ನು ಕಳೆದುಕೊಳ್ಳಲೂಬಹುದು.
ವಿಶೇಷವಾಗಿ ಕಂಪ್ಯೂಟರ್ ಸ್ಕ್ರೀನ್ ಅಥವಾ ಮೊಬೈಲ್ ಸ್ಕ್ರೀನ್‌ನ್ನು ಗಂಟೆಗಳ ಕಾಲ ನೋಡುತ್ತಿರುವಾಗಿ ನಾವು ನಮ್ಮ ಕಣ್ಣುಗಳನ್ನು ಆಗಾಗ್ಗೆ ಕಡೆಗಣಿಸುತ್ತಿರುತ್ತೇವೆ. ಕಣ್ಣುಗಳ ಬಗ್ಗೆ ನಮ್ಮ ನಿರ್ಲಕ್ಷವು ಕಾಲಕ್ರಮೇಣ ನಮ್ಮನ್ನು ಅಂಧರನ್ನಾಗಿಸಬಹುದು. ಹೀಗಾಗಿ ನಿಯಮಿತವಾಗಿ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.