ಮಕ್ಕಳ ಕಾಯಿಲೆ ಕುರಿತು ಜಾಗೃತಿ ಅತ್ಯಗತ್ಯ: ಸಚಿವ ಝಮೀರ್ ಆಪ್ತ ಕಾರ್ಯದರ್ಶಿ ಅಶ್ರಫುಲ್ ಹಸನ್

ಬೆಂಗಳೂರು, ಮೇ 4: ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕುಂದುವ (ಇಮ್ಯುನೊ ಡಿಫಿಶಿಯೆನ್ಸಿ-ಪಿಐಡಿಎಸ್) ಕಾಯಿಲೆ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಸಚಿವ ಝಮೀರ್ ಅಹ್ಮದ್‌ಖಾನ್ ಅವರ ಆಪ್ತ ಕಾರ್ಯದರ್ಶಿ ಅಶ್ರಫುಲ್ ಹಸನ್ ಹೇಳಿದರು.
ಶನಿವಾರ ನಗರದ ರಿಚ್ಮಂಡ್ ಟೌನ್‌ನ ಕರ್ನಾಟಕ ಹಾಕಿ ಅಸೋಸಿಯೇಷನ್ ಕ್ಲಬ್ ಸಭಾಂಗಣದಲ್ಲಿ ವಿಶ್ವ ಪ್ರತಿರಕ್ಷಾ (ಇಮ್ಯುನಾಲಾಜಿ) ದಿನದ ಅಂಗವಾಗಿ ಪ್ರೈಮರಿ ಇಮ್ಯುನೊ ಡಿಫಿಶಿಯೆನ್ಸಿ ರೋಗಿಗಳ ಕಲ್ಯಾಣ ಸೊಸೈಟಿ ಆಯೋಜಿಸಿದ್ದ, ಪೋಷಕರಲ್ಲಿ ಮಕ್ಕಳ ಕಾಯಿಲೆಗಳ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಮ್ಯುನೊ ಡಿಫಿಶಿಯೆನ್ಸಿ (ಪಿಐಡಿಎಸ್) ಎಂಬ ಕಾಯಿಲೆಯು ಮಕ್ಕಳಲ್ಲಿ ಕಂಡು ಬರುತ್ತದೆ. ಅಷ್ಟೇ ಅಲ್ಲದೆ, ಇದು ಹುಟ್ಟಿನಿಂದ ಬರುತ್ತದೆ. ಹೀಗಾಗಿ, ಇದರ ಬಗ್ಗೆ ಪೋಷಕರಲ್ಲಿ ಅರಿವು ಅಗತ್ಯವಿದ್ದು, ಈ ಕಾಯಿಲೆಯ ಲಕ್ಷಣಗಳಿರುವ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷವಾದ ಶಿಕ್ಷಣ, ತರಬೇತಿ ಮತ್ತು ಆರೈಕೆ ಮಾಡುವ ವಾತಾವರಣ ನಮ್ಮಲ್ಲಿ ನಿರ್ಮಾಣ ಆಗಬೇಕು ಎಂದು ಅವರು ತಿಳಿಸಿದರು.
ಸರಕಾರಗಳು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ. ಇದರ ಜೊತೆಗೆ ಸಂಘ-ಸಂಸ್ಥೆಗಳು ಸಹ ಜನರಲ್ಲಿ ಅರಿವು ಮೂಡಿಸಿದರೆ, ಹಲವು ಕಾಯಿಲೆಗಳನ್ನು ನಮ್ಮ ಪರಿಸರದಿಂದ ಮುಕ್ತ ಮಾಡಬಹುದಾಗಿದೆ ಎಂದು ಅಶ್ರಫುಲ್ ಹಸನ್ ನುಡಿದರು.
ಕೈಕಾ ಫೌಂಡೇಷನ್ ಅಧ್ಯಕ್ಷ ಡಾ.ಎಸ್.ಎಸ್.ಎ.ಖಾದರ್ ಮಾತನಾಡಿ, ವೈದ್ಯಕೀಯ ಸೇವೆ ಎನ್ನುವುದು ಒಂದು ಕಾಲದಲ್ಲಿ ಸೇವೆ ಎಂದೇ ಹೇಳಲಾಗುತಿತ್ತು. ಅಷ್ಟೇ ಅಲ್ಲದೆ, ರೋಗಿಯ ಆರೋಗ್ಯ ಕಾಳಜಿಯೇ ಆ ದಿನಗಳಲ್ಲಿ ಮೊದಲ ಆದ್ಯತೆಯಾಗಿತ್ತು. ಆದರೆ, ಇದೀಗ, ವೈದ್ಯಕೀಯ ಸೇವೆ ಹೆಸರಿನಲ್ಲಿ ಸುಲಿಗೆ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವೈದ್ಯಕೀಯ ವ್ಯವಸ್ಥೆ ಈಗ ಮುಂಚಿನಂತಿಲ್ಲ. ಅದು ಈಗ ಸೇವೆಯಾಗಿ ಉಳಿದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣವನ್ನು ವಸೂಲಿ ಮಾಡುತ್ತಾರೆ ಎಂದ ಅವರು, ಸರಕಾರಿ ಆಸ್ಪತ್ರೆಗಳಲ್ಲಿ ಹಣ ವಸೂಲಿ ಎನ್ನುವುದು ಇಲ್ಲ. ಆದರೆ, ಸಾರ್ವಜನಿಕರಿಗೆ ಇನ್ನಷ್ಟು ಗುಣಮಟ್ಟದ ಸೇವೆ ಒದುಗಿಸಲು ಈ ಆಸ್ಪತ್ರೆಗಳು ಮುಂದಾಗಲಿ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ, ಪಿಐಡಿಎಸ್ ತಜ್ಞ ಸಾಗರ್ ಭಟ್ ಅವರು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುವ ಕಾರಣ ಕುರಿತು ಪೋಷಕರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸ್ಟ್ರಾಂಡ್ ಲೈಫ್ ಬಯೋಸೈನ್ಸ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರೊ.ವಿಜಯ ಚಂದ್ರು, ಪ್ರೈಮರಿ ಇಮ್ಯುನೊ ಡಿಫಿಶಿಯೆನ್ಸಿ ರೋಗಿಗಳ ಕಲ್ಯಾಣ ಸೊಸೈಟಿಯ ಕಾರ್ಯದರ್ಶಿ ಎಂ.ಎಚ್. ರುಕ್ಸಾನಾ, ಸಂಸ್ಥಾಪಕ ಸದಸ್ಯ ಎ.ಬಿ.ಪಾಟೀಲ್, ಸದಸ್ಯ ಎಂ.ಎಚ್ ಹನೀಫ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕುಂದುವ (ಇಮ್ಯುನೊ ಡಿಫಿಶಿಯೆನ್ಸಿ- ಪಿಐಡಿಎಸ್) ಕಾಯಿಲೆ ಲಕ್ಷಣಗಳು ಹೀಗಿವೆ.
* ಒಂದೇ ವರ್ಷದಲ್ಲಿ ಹಲವು ಬಾರಿ ಕಿವಿ ಸೋಂಕು ಕಾಣಿಸಿಕೊಳ್ಳುವುದು
* ಒಂದೇ ವರ್ಷದಲ್ಲಿ ಎರಡಕ್ಕಿಂತ ಅಧಿಕ ಬಾರಿ ನ್ಯುಮೊನಿಯಾ
* ದೇಹದ ಭಾಗಗಳಲ್ಲಿ ಹುಣ್ಣುಗಳು
* ಏಕಾಏಕಿ ತೂಕ ಕಡಿಮೆ
* ದೇಹದ ಎತ್ತರದಲ್ಲಿ ವಿಫಲತೆ







