ಗೋಮಾಂಸ ಸಾಗಾಟ ಶಂಕೆಯಲ್ಲಿ ವ್ಯಕ್ತಿಗೆ ಥಳಿತ: ಸಂತ್ರಸ್ತನ ವಿರುದ್ಧವೇ ಎಫ್ಐಆರ್!

ಬೇಗುಸರಾಯಿ (ಬಿಹಾರ್), ಮೇ 4: ಬೇಗುಸರಾಯಿಯ ಧಾನ್‌ಕೌಲ್‌ನಲ್ಲಿ ಗೋಮಾಂಸ ಸಾಗಿಸುತ್ತಿದ್ದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯೋರ್ವರ ಮೇಲೆ ಗುಂಪೊಂದು ಪೈಶಾಚಿಕವಾಗಿ ಹಲ್ಲೆ ನಡೆಸಿದರೂ ಪೊಲೀಸರು ಸಂತ್ರಸ್ತನ ವಿರುದ್ಧವೇ ಎಫ್‌ಐಆರ್ ದಾಖಲಿಸಿರುವ ವಿಲಕ್ಷಣ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಗುಂಪಿನಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನು ಬೇಗುಸರಾಯಿಯ 48ರ ಹರೆಯದ ಮುಹಮ್ಮದ್ ಇಸ್ತಿಕಾರ್ ಎಂದು ಗುರುತಿಸಲಾಗಿದೆ. ಮುಹಮ್ಮದ್ ಇಸ್ತಿಕಾರ್ ತನ್ನ ಪುತ್ರಿಯ ವಿವಾಹದ ಮಾತುಕತೆಗೆ ಅತಿಥಿಗಳು ಆಗಮಿಸುವ ಹಿನ್ನೆಲೆಯಲ್ಲಿ ಟೇಗ್ರಾ ಮಾರುಕಟ್ಟೆಯಿಂದ ಮಾಂಸ ಖರೀದಿಸಿ ಸೈಕಲ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಈ ಸಂದರ್ಭ ಆಲಾಪುರ ಗ್ರಾಮದ ಗುಂಪೊಂದು ಇಸ್ತಿಕಾರ್ ಗೋಮಾಂಸ ಕೊಂಡೊಯ್ಯುತ್ತಿದ್ದಾರೆ ಎಂದು ಶಂಕಿಸಿ ತಡೆದು ಹಲ್ಲೆ ನಡೆಸಿತು. ದೇವ ಚೌಧರಿ, ರಂಗನಾಥ್ ಚೌಧರಿ, ರಾಹುಲ್ ಚೌಧರಿ, ಚೋಟು ಚೌಧರಿ, ಗುಂಜನ್ ಶರ್ಮಾ ಸೇರಿದಂತೆ ಹಲವರನ್ನು ಒಳಗೊಂಡ ಗುಂಪು ಇಸ್ತಿಕಾರ್ ಅವರನ್ನು ಸಮೀಪದ ಗದ್ದೆಗೆ ಎಳೆದೊಯ್ದು ದೊಣ್ಣೆ ಹಾಗೂ ಕಬ್ಬಿಣದ ರಾಡ್‌ನಿಂದ ಥಳಿಸಿತು. ಅಲ್ಲದೆ ಗುಂಪು ಇಸ್ತಿಕಾರ್ ಅವರಲ್ಲಿ ಇದ್ದ 15 ಸಾವಿರ ರೂಪಾಯಿ ಸುಲಿಗೆ ಮಾಡಿತು. 5 ಸಾವಿರ ರೂಪಾಯಿ ನೀಡುವಂತೆ ಬಲವಂತಪಡಿಸಿತು.
ಹಲ್ಲೆಯ ಸುದ್ದಿ ತಿಳಿದ ಇಸ್ತಿಕಾರ್ ಅವರ ಕುಟುಂಬ ಗ್ರಾಮದ ಇತರ ನಿವಾಸಿಗಳೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿ ಗಂಭೀರ ಗಾಯಗೊಂಡಿದ್ದ ಇಸ್ತಿಕಾರ್ ಅವರನ್ನು ಬೇಗುಸರಾಯಿ ಜಿಲ್ಲೆಯ ಸದಾರ್ ಆಸ್ಪತ್ರೆಯಲ್ಲಿ ದಾಖಲಿಸಿತ್ತು. ಈ ಎಲ್ಲ ವಿವರಗಳನ್ನು ಇಸ್ತಿಕಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದರು. ಆದರೆ, ಪೊಲೀಸರು ಎಫ್‌ಐಆರ್ ಅನ್ನು ಇಸ್ತಿಕಾರ್ ವಿರುದ್ಧವೇ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಸುಮನ್ ಚೌಧರಿ, ಗೋಮಾಂಸ ಸಾಗಿಸುತ್ತಿದ್ದ ಆರೋಪದಲ್ಲಿ ಇಸ್ತಿಕಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮಾಂಸವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ಅದರ ವರದಿ ಬಂದ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದಿದ್ದಾರೆ.







