ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕ ಮತ ಎಣಿಕೆ: ಮಂಜುನಾಥ್ ಪ್ರಸಾದ್
ಬೆಂಗಳೂರು, ಮೇ 4: ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಸಿದ್ಧತೆ ನಡೆಯುತ್ತಿದ್ದು, ಪ್ರತಿಯೊಂದು ಕ್ಷೇತ್ರದ ವ್ಯಾಪ್ತಿಯಲ್ಲಿ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕವಾಗಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ನಗರದ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಶನಿವಾರ ಬೆಂಗಳೂರು ಮೂರು ಲೋಕಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಹಾಗೂ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಜಂಟಿಯಾಗಿ ಮತಯಂತ್ರಗಳನ್ನಿಟ್ಟಿರುವ ಸ್ಟ್ರಾಂಗ್ ರೂಂಗಳ ಭದ್ರತೆ ಹಾಗೂ ಮತ ಎಣಿಕೆ ಸಿದ್ಧತೆಗಳ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಮೇ 16 ಹಾಗೂ ಮೇ 21 ರಂದು ಎರಡು ಹಂತದಲ್ಲಿ ಮತ ಎಣಿಕೆ ಕುರಿತು ತರಬೇತಿ ನೀಡಲಾಗುತ್ತಿದೆ. ಮೇ 22 ರಂದು ಯಾವ ಲೋಕಸಭಾ ಕ್ಷೇತ್ರಕ್ಕೆ ನಿಯೋಜನೆಗೊಂಡಿದ್ದಾರೆ ಹಾಗೂ ಮೇ 23 ರಂದೇ ಯಾವ ವಿಧಾಸಭಾ ಕ್ಷೇತ್ರಕ್ಕೆ ನಿಯೋಜನೆಗೊಂಡಿದ್ದಾರೆ ಎಂಬ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ನಗರದ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ 8 ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತ್ಯೇಕವಾಗಿ ಮತ ಎಣಿಕೆ ಮಾಡಲಾಗುತ್ತದೆ. ಅಲ್ಲದೆ, ಎಲ್ಲ ಕಡೆಗಳಲ್ಲಿಯೂ ಮತಯಂತ್ರಗಳಿರುವ ಸ್ಟ್ರಾಂಗ್ ರೂಂಗಳ ಪಕ್ಕದಲ್ಲಿಯೇ ಮತ ಎಣಿಕೆ ಕೇಂದ್ರಗಳಿರುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿಯೊಂದು ಕೊಠಡಿಗೆ ಒಟ್ಟು 15 ಟೇಬಲ್‌ಗಳನ್ನು ಹಾಕಲಾಗುತ್ತದೆ. ಕೊಠಡಿಗೆ ಒಬ್ಬರು ಮತ ಎಣಿಕೆ ರಿಟರ್ನಿಂಗ್ ಅಧಿಕಾರಿ, 1 ಸಹಾಯಕ ರಿಟರ್ನಿಂಗ್ ಅಧಿಕಾರಿ ಹಾಗೂ ಕೇಂದ್ರ ಸರಕಾರದ ಸಿಬ್ಬಂದಿ ಒಬ್ಬರು ಸೂಕ್ಷ್ಮ ವೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ವಿವಿ ಪ್ಯಾಟ್ ಹಾಗೂ ಇವಿಎಂಗಳಲ್ಲಿನ ಮತಗಳು ಹೊಂದಾಣಿಕೆಯಾಗದಿದ್ದಲ್ಲಿ ವಿವಿ ಪ್ಯಾಟ್‌ಗಳಲ್ಲಿನ ಮತಗಳನ್ನೇ ಅಂತಿಮ ಎಂದು ಪರಿಗಣಿಸಲಾಗುತ್ತದೆ. ಮತ ಎಣಿಕೆ ಸಂದರ್ಭದಲ್ಲಿ ಸಿಬ್ಬಂದಿಗೆ ಅಗತ್ಯವಾದ ಸ್ಥಳಾವಾಕಾಶದ ಆಧಾರದ ಮೇಲೆ ಪಕ್ಷಗಳ ಏಜೆಂಟ್‌ಗಳನ್ನು ನೇಮಿಸಿಕೊಳ್ಳು ಅವಕಾಶ ನೀಡಲಾಗುತ್ತದೆ. ಮೊದಲಿಗೆ ರಾಷ್ಟ್ರೀಯ, ರಾಜ್ಯ ಹಾಗೂ ನೋಂದಾಯಿತ ಪಕ್ಷಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಇತ್ತೀಚಿಗೆ ಚುನಾವಣಾ ಆಯೋಗದ ನಿರ್ದೇಶನದಂತೆ ಮತ ಎಣಿಕೆ ಸಂದರ್ಭದಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರವಾರು ಎಲ್ಲವನ್ನೂ ಸಂಪೂರ್ಣವಾಗಿ ವಿಡಿಯೋ ರೆಕಾರ್ಡಿಂಗ್ ಮಾಡಲಾಗುತ್ತದೆ. ಅಲ್ಲದೆ, ಅದನ್ನು ಪ್ರತಿಯೊಬ್ಬ ಅಭ್ಯರ್ಥಿಗೂ ಸಿಡಿ ಮಾಡಿ ಹಂಚಲಾಗುತ್ತದೆ.
- ಮಂಜುನಾಥ್ ಪ್ರಸಾದ್, ನಗರ ಜಿಲ್ಲಾ ಚುನಾವಣಾಧಿಕಾರಿ
ಲಾಟರಿ ಮೂಲಕ ವಿವಿಪ್ಯಾಟ್ ಆಯ್ಕೆ
ಮತ ಎಣಿಕೆ ಸಂದರ್ಭದಲ್ಲಿ ಮೊದಲಿಗೆ ಪೋಸ್ಟಲ್ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಬಳಿಕ ಇವಿಎಂ ಎಣಿಕೆ ಆರಂಭವಾಗಲಿದ್ದು, ಮತ ಎಣಿಕೆ ಪೂರ್ಣಗೊಂಡ ಬಳಿಕ ಸುಪ್ರೀಂಕೋರ್ಟ್ ನಿರ್ದೇಶನದಂತೆ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ 5 ವಿವಿ ಪ್ಯಾಟ್‌ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಎಣಿಕೆ ಮಾಡಲಾಗುತ್ತದೆ ಎಂದರು.







