ಲಂಚ ಸ್ವೀಕಾರ ಆರೋಪಿಯ ಜಾಮೀನು ಅರ್ಜಿ ವಜಾ
ಮಂಗಳೂರು, ಮೇ 4: ಪ್ರಾಂಶುಪಾಲರ ಆಡಿಟ್ ಕ್ಲಿಯರೆನ್ಸ್ ನೀಡಲು ಲಂಚ ಕೇಳಿದ ಆರೋಪದಲ್ಲಿ ಬಂಧಿತನಾಗಿದ್ದ ಆರೋಪಿಯ ಜಾಮೀನು ಅರ್ಜಿ ಶನಿವಾರ ವಜಾಗೊಂಡಿದೆ.
ಕಾಲೇಜು ಶಿಕ್ಷಣ ಇಲಾಖೆಯ ಅಕೌಂಟ್ ಸುಪರಿಟೆಂಡೆಂಟ್‌ಆಗಿರುವ ಆರೋಪಿ ಲೋಕೇಶ್ ಎ.ಎಂ. ಎಂಬವರ ಅರ್ಜಿ ವಜಾಗೊಂಡಿದೆ.
ಬೆಟ್ಟಂಪಾಡಿ ಕಾಲೇಜು ಪ್ರಾಂಶುಪಾಲ ರಾಧಾಕೃಷ್ಣ ಭಟ್ ಸದ್ಯದಲ್ಲೇ ನಿವೃತ್ತಿಯಾಗಲಿದ್ದು, ‘ಆಡಿಟ್ ಕ್ಲೀಯರೆನ್ಸ್’ ನೀಡಲು ಆರೋಪಿ ಲಂಚ ಕೇಳಿದ್ದ ಬಗ್ಗೆ ಮಂಗಳೂರಿನ ಭ್ರಷ್ಟಾಚಾರ ನಿಗ್ರಹದಳದಲ್ಲಿ ದೂರು ನೀಡಿದ್ದರು.
ಎಪ್ರಿಲ್ 26ರಂದು ಸುರತ್ಕಲ್ ಬಳಿ ಆರೋಪಿ ಲೋಕೇಶ್‌ನು ಬೆಟ್ಟಂಪಾಡಿ ಕಾಲೇಜು ಪ್ರಾಂಶುಪಾಲ ರಾಧಾಕೃಷ್ಣ ಭಟ್ ಅವರಿಂದ 2.50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಮಂಗಳೂರಿನ ಭ್ರಷ್ಟಾಚಾರ ನಿಗ್ರಹದಳದ ಎಸ್ಪಿ ಉಮಾ ಪ್ರಶಾಂತ್ ಮತ್ತು ಇನ್‌ಸ್ಪೆಕ್ಟರ್ ಯೋಗೀಶ್‌ಕುಮಾರ್ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿತ್ತು. ಆರೋಪಿ ಈಗ ನ್ಯಾಯಾಂಗ ಬಂದನದಲ್ಲಿದ್ದು, ಜಾಮೀನಿಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದನು.
ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಳೀಧರ್ ಪೈ, ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ವಾದವನ್ನು ಪುರಸ್ಕರಿಸಿ, ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಪರ ವಿಶೇಷ ಸರಕಾರಿ ಅಭಿಯೋಜಕ ಮತ್ತು ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ವಾದಿಸಿದ್ದರು.





