ಹಲ್ಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಪುತ್ತೂರು: ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಮರೀಲ್ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ ಬಳಿಯ ಹಾರ್ಡ್‍ವೇರ್ ಸಂಸ್ಥೆಯೊಂದರ ಜಗಳಿಗೆ ರಾತ್ರಿ ವೇಳೆ ಅಕ್ರಮ ಪ್ರವೇಶ ಮಾಡಿ, ಅಲ್ಲಿನ ಇಬ್ಬರ ಕಾರ್ಮಿಕರಿಗೆ ಹಲ್ಲೆ ನಡೆಸಿದ ಪ್ರಕರಣದ ಎಲ್ಲಾ ಮೂರು ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆಮ್ಮಿಂಜೆ ಗ್ರಾಮದ ಮರೀಲು ಕ್ಯಾಂಪ್ಕೊ ಕಾರ್ಖಾನೆ ಬಳಿಯ ಹಾರ್ಡ್‍ವೇರ್, ಸಿಮೆಂಟ್, ಕಬ್ಬಿಣದ ಸಾಮಗ್ರಿಗಳ ಮಾರಾಟ ಸಂಸ್ಥೆಯ ಬಳಿಗೆ ಮೂವರಿದ್ದ ತಂಡವೊಂದು ಕಳೆದ ಎಪ್ರಿಲ್ 22ರಂದು ರಾತ್ರಿ ವೇಳೆ ಬೈಕಿನಲ್ಲಿ ಬಂದು ಸಂಸ್ಥೆಯ ಜಗಲಿಗೆ ಅಕ್ರಮವಾಗಿ ಪ್ರವೇಶಿಸಿದ್ದರು. ಈ ವೇಳೆ ಅಲ್ಲಿದ್ದ ಸಂಸ್ಥೆಯ ಕಾರ್ಮಿಕರಾದ ಮುಲ್ಕಿ ಮೂಲದ ಧನು (18) ಹಾಗೂ ಸುಳ್ಯ ತಾಲ್ಲೂಕಿನ ಅಜ್ಜಾವರದ ಶುಭಚಂದ್ರ (22) ಅವರು ಸಂಸ್ಥೆಯ ಭದ್ರತೆಯ ದೃಷ್ಟಿಯಿಂದ ಪ್ರಶ್ನಿಸಿದ್ದರು. ಈ ಕಾರಣಕ್ಕಾಗಿ ಆರೋಪಿಗಳು ಅವರಿಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿತ್ತು.
ಹಲ್ಲೆ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪುತ್ತೂರು ನಗರ ಪೊಲೀಸರು ಆರೋಪಿಗಳ ಪೈಕಿ ಕೆಮ್ಮಿಂಜೆ ಗ್ರಾಮದ ಮುಸ್ತಾಫ(19ವ) ಮತ್ತು ಕೆಮ್ಮಿಂಜೆ ಗ್ರಾಮದ ನೈತ್ತಾಡಿ ನಿವಾಸಿ ನೌಶಾದ್(23ವ) ಎಂಬವರನ್ನು ಈ ಹಿಂದೆಯೇ ಬಂಧಿಸಿದ್ದರು. ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಕೆಮ್ಮಿಂಜೆ ಗ್ರಾಮದ ಸಂಜಯನಗರ ನಿವಾಸಿ ಸೈಪುದ್ದೀನ್(23ವ) ಎಂಬಾತನನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.





