ಶಾಸಕ ಸುರೇಶ್ ಗೌಡ ಹೇಳಿಕೆಗೆ ಖಂಡನೆ: ಕ್ಷಮೆಯಾಚನೆಗೆ ಕಾಂಗ್ರೆಸ್ ಮುಖಂಡರ ಒತ್ತಾಯ

ಮಂಡ್ಯ, ಮೇ 4: ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಕುರಿತಂತೆ ನಾಗಮಂಗಲ ಶಾಸಕ ಕೆ.ಸುರೇಶ್‍ಗೌಡ ಅವರ ಅವಹೇಳನಕಾರಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡರು, ಕೂಡಲೇ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.
ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಬೇಲೂರು ಸೋಮಶೇಖರ್, ಸುರೇಶ್‍ಗೌಡ ಹೇಳಿಕೆ ಅವರ ಸ್ಥಾನಕ್ಕೆ ಘನತೆ ತರುವಂತಹದ್ದಲ್ಲ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವರಾದ ಎಚ್.ಡಿ.ರೇವಣ್ಣ, ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಹಾಲಿ ಸಂಸದ ಎಲ್.ಆರ್.ಶಿವರಾಮೇಗೌಡ ಸೇರಿದಂತೆ ಹಲವು ಜೆಡಿಎಸ್ ನಾಯಕರು ಚುನಾವಣೆ ವೇಳೆ ಬಳಸಿದ ಪದಗಳು ಮಹಿಳೆಯರಿಗೆ ಅವಮಾನ ಮಾಡುವಂತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಚುನಾವಣೆ ಮುಗಿದಿದೆ. ಆದರೂ ಜೆಡಿಎಸ್ ನಾಯಕರು ತಮ್ಮ ನಾಲಿಗೆಯನ್ನು ಹರಿಬಿಡುವುದನ್ನು ನಿಲ್ಲಿಸಿಲ್ಲ. ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿರುವ ಎಚ್.ವಿಶ್ವನಾಥ್ ಅವರು ವಿಚಾರವಾದಿಗಳಾಗಿದ್ದು, ಅವರ ಪಕ್ಷದವರು ಇಂತಹ ಅಸಂವಿಧಾನಿಕ ಪದಗಳನ್ನು ಬಳಸುತ್ತಿರುವ ಬಗ್ಗೆ ಎಚ್ಚರವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಐಆರ್‍ಎಸ್ ಹುದ್ದೆಯನ್ನು ಬಿಡಿಸಿ ಲಕ್ಷ್ಮೀ ಅಶ್ವಿನ್‍ಗೌಡರನ್ನು ಚುನಾವಣೆಯ ಸಂಪನ್ಮೂಲಕ್ಕಾಗಿ ಬಳಸಿಕೊಂಡರು. ಮದ್ದೂರಿನ ಶಾಸಕರಾಗಿದ್ದ ಸಿದ್ದರಾಜು ಅವರು ನಿಧನರಾದಾಗ ಕಲ್ಪನಾಸಿದ್ದರಾಜು ಅವರನ್ನು ಚುನಾವಣೆ ನಿಲ್ಲಿಸಿ, ಈಗ ಅವರನ್ನು ಕೈಬಿಡುವ ಮೂಲಕ ಮೂಲೆ ಗುಂಪು ಮಾಡಿದರು ಎಂದು ಅವರು ವ್ಯಂಗ್ಯವಾಡಿದರು.
ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಎಚ್.ಬಿ.ಅರವಿಂದ್‍ಕುಮಾರ್, ವಿಜಯ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಿ.ಸಿ.ಆನಂದ್, ಅಲ್ಪಸಂಖ್ಯಾತ ಮುಖಂಡ ಮುಸವೀರ್ ಖಾನ್, ಆರೀಫುಲ್ಲಾ ಹಾಗೂ ಪ್ರಕಾಶ್ ಉಪಸ್ಥಿತರಿದ್ದರು.







