ಭದ್ರಾ ನಾಲೆಗಳಿಗೆ ನೀರು ಹರಿಸಲು ಆಗ್ರಹಿಸಿ ರೈತರಿಂದ ಧರಣಿ

ಶಿವಮೊಗ್ಗ, ಮೇ 4: ಭದ್ರಾ ಜಲಾಶಯದಿಂದ ಅಚ್ಚುಕಟ್ಟು ವ್ಯಾಪ್ತಿಯ ಬಲ ಮತ್ತು ಎಡದಂಡೆ ನಾಲೆಗಳಿಗೆ ಮೇ ತಿಂಗಳ ಅಂತ್ಯದವರೆಗೆ ನಿರಂತರವಾಗಿ ನೀರು ಹರಿಸಬೇಕೆಂದು ಒತ್ತಾಯಿಸಿ ಶನಿವಾರ ನಗರದ ಹೊರವಲಯ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯು ಧರಣಿ ನಡೆಸಿ, ಸ್ಥಳೀಯ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರಿಗೆ ಮನವಿ ಪತ್ರ ಅರ್ಪಿಸಿತು.
ಬೇಸಿಗೆ ಹಂಗಾಮಿನಲ್ಲಿ ರೈತರು ಭತ್ತ ಬೆಳೆಯುವ ಸಲುವಾಗಿ ಭದ್ರಾ ಅಣೆಕಟ್ಟೆಯಿಂದ ನೀರು ಹರಿಸಲಾಗಿತ್ತು. ಇದೇ ನೀರು ನೆಚ್ಚಿಕೊಂಡ ಅಚ್ಚುಕಟ್ಟ ಪ್ರದೇಶದ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದಾರೆ. ರೈತರು ಬೆಳೆದ ಭತ್ತದ ಬೆಳೆ ತೆನೆಯೊಡೆದು ಹೂ ಕಟ್ಟುವ ಹಂತದಲ್ಲಿದೆ. ಆದರೆ ಈ ಹಿಂದೆ ಸರ್ಕಾರ ನಿರ್ಧರಿಸಿದ್ದಂತೆ ಮೇ ತಿಂಗಳ 8 ರಿಂದ ನಾಲೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುತ್ತಿದೆ.
ರೈತರು ಬೆಳೆದಿರುವ ಭತ್ತದ ಬೆಳೆ ಇನ್ನು ಕೂಡ ಕಟಾವಿನ ಹಂತಕ್ಕೆ ಬಂದಿಲ್ಲ. ಕನಿಷ್ಟ ಇನ್ನು 20 ದಿನಗಳ ಕಾಲ ಭತ್ತದ ಬೆಳೆಗಳಿಗೆ ನೀರುಣಿಸಲೇಬೇಕಾಗಿದೆ. ಈಗಾಗಲೇ ಪ್ರಕಟಿಸಿರುವಂತೆ ಮೇ 8 ರಂದು ನೀರು ನಿಲುಗಡೆ ಮಾಡಿದಲ್ಲಿ ರೈತರು ಬೆಳೆದ ಭತ್ತದ ಬೆಳೆ ಸಂಪೂರ್ಣ ನಾಶವಾಗುತ್ತದೆ. ಇದನ್ನೇ ನಂಬಿಕೊಂಡ ರೈತರ ಬದುಕು ಮೂರಾಬಟ್ಟೆಯಾಗುತ್ತದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಅಚ್ಚುಕಟ್ಟು ವ್ಯಾಪ್ತಿಯ ರೈತರು ಬತ್ತ ಬೆಳೆಯಲು ಸಾಕಷ್ಟು ಶ್ರಮಪಟ್ಟಿದ್ದಾರೆ. ಪ್ರತಿ ಎಕರೆ ಭತ್ತ ಬೆಳೆಯಲು ಸುಮಾರು 25 ಸಾವಿರ ರೂ. ಬಂಡವಾಳ ಹಾಕಿದ್ದಾರೆ. ಈ ಬಂಡವಾಳ ಕೂಡ ಸಾಲದ ರೂಪದಲ್ಲಿದೆ. ಆದರೆ ಎಲ್ಲಿ ಬೆಳೆ ಕೈಗೆಟಕುವುದಿಲ್ಲವೋ ಎಂಬ ಆತಂಕದಲ್ಲಿ ರೈತ ಸಮೂಹವಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಭತ್ತದ ಬೆಳೆ ನಾಶವಾಗುವುದಲ್ಲದೇ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗಲಿದೆ. ರೈತರು ಬಹುದೊಡ್ಡ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಲಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಗಮನಹರಿಸಿ, ಮೇ ತಿಂಗಳ ಅಂತ್ಯದವರೆಗೆ ಭದ್ರಾ ಎಡದಂಡೆ ನಾಲೆಗಳಲ್ಲಿ ನೀರು ಹರಿಸಬೇಕು. ಈ ಮೂಲಕ ರೈತರು ಬೆಳೆದ ಬೆಳೆ ನಷ್ಟವಾಗದಂತೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮೇ ತಿಂಗಳ ಅಂತ್ಯದವರೆಗೆ ಭದ್ರಾ ಅಣೆಕಟ್ಟೆಯಿಂದ ಎಡ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಕೆ.ಟಿ.ಗಂಗಾಧರ್, ಯಶವಂತರಾವ್ ಘೋರ್ಪಡೆ, ಡಿ.ವಿ.ವೀರೇಶ್, ರಂಗೋಜಿರಾವ್, ಪಾಂಡುರಂಗಪ್ಪ, ರಾಮಚಂದ್ರರಾವ್,ಕೆ.ಸಿ. ಗಂಗಾಧರ್, ಹಿರಿಯಣ್ಣಯ್ಯ ಸೇರಿದಂತೆ ಮೊದಲಾದವರಿದ್ದರು.







