5.7 ಮಿಲಿಯನ್ ಡಾಲರ್ ಸಿಗಲಿದೆ ಎಂದು ನಂಬಿ 33 ಲಕ್ಷ ಕಳೆದುಕೊಂಡ ಶಿವಮೊಗ್ಗದ ವ್ಯಕ್ತಿ !
ಇಂತಹ ಇ-ಮೇಲ್ ಗಳ ಬಗ್ಗೆ ಎಚ್ಚರವಿರಲಿ...

ಶಿವಮೊಗ್ಗ, ಮೇ 4: ವಂಚಕರ ಇ-ಮೇಲ್ ಸಂದೇಶ ನಂಬಿ ಶಿವಮೊಗ್ಗದ ವ್ಯಕ್ತಿಯೋರ್ವರು ಲಕ್ಷಾಂತರ ರೂ. ಕಳೆದುಕೊಂಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆ ಹಿನ್ನೆಲೆ: ವಿದ್ಯಾನಗರ ಬಡಾವಣೆಯ ನಿವಾಸಿ ಹರೀಶ್ ಎಂಬವರೇ ವಂಚನೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರ ಇ-ಮೇಲ್‍ಗೆ ಅಪರಿಚಿತ ವ್ಯಕ್ತಿಯೋರ್ವರ ಇ-ಮೇಲ್ ನಿಂದ ಸಂದೇಶವೊಂದು ಬಂದಿತ್ತು. 'ಅಮೆರಿಕಾ ನಿವಾಸಿಯಾದ ನಾನು ಕ್ಯಾನ್ಸರ್ ಪೀಡಿತನಾಗಿದ್ದೇನೆ. ಭಾರತದ ಬಡ ಮಕ್ಕಳಿಗೆ ಸಹಾಯ ಮಾಡಲು ಉದ್ದೇಶಿಸಿದ್ದೇನೆ. ಈ ಕಾರಣದಿಂದ ತನ್ನ ಬಳಿಯಿರುವ 5.7 ಮಿಲಿಯನ್ ಡಾಲರನ್ನು ದಾನವಾಗಿ ನೀಡಲು ನಿರ್ಧರಿಸಿದ್ದೇನೆ. ತಮ್ಮ ವಿವರ ಕಳುಹಿಸಿ ಕೊಡಿ' ಎಂದು ಹೇಳಲಾಗಿತ್ತು.
ಇದನ್ನು ನಂಬಿದ ಹರೀಶ್ ರವರು ತಮ್ಮ ವಿವರ ಕಳುಹಿಸಿಕೊಟ್ಟಿದ್ದರು. ತದನಂತರ ಇವರಿಗೆ ಕರೆ ಮಾಡಿದ ಮಹಿಳೆಯೊಬ್ಬರು ತಮ್ಮ ವಕೀಲರು ನಿಮಗೆ ಕರೆ ಮಾಡಿ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ. ಅದರಂತೆ ವ್ಯಕ್ತಿಯೋರ್ವ ಇವರಿಗೆ ಕರೆ ಮಾಡಿದ್ದ. ನಿಮ್ಮ ಖಾತೆಗೆ ಆರ್.ಬಿ.ಐ. ಮೂಲಕ ಹಣ ವರ್ಗಾಯಿಸಲಾಗುವುದು ಎಂದು ಹೇಳಿದ್ದಾರೆ. ವಿವಿಧ ತೆರಿಗೆಗಳನ್ನು ನೀವೇ ಪಾವತಿಸಬೇಕು ಎಂದು ಹೇಳಿದ್ದರು. ಅದರಂತೆ ಹರೀಶ್ ರವರು ವಿವಿಧ ಹಂತಗಳಲ್ಲಿ ವಂಚಕರು ಹೇಳಿದ ಬ್ಯಾಂಕ್ ಖಾತೆಗೆ ಸುಮಾರು 33 ಲಕ್ಷ ರೂ. ಪಾವತಿಸಿದ್ದರು. ನಂತರ ವಂಚನೆಗೊಳಗಾಗಿರುವುದನ್ನು ಅರಿತ ಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.







