ಕೃಷಿಕರಿಗೆ ತೊಂದರೆ ನೀಡಿದರೆ ಉಗ್ರ ಹೋರಾಟ: ಸಚಿನ್ ಮೀಗಾ ಎಚ್ಚರಿಕೆ
ಪರಿಭಾವಿತ ಅರಣ್ಯದ ಗಡಿಗುರುತಿಗೆ ಕಂದಾಯ-ಅರಣ್ಯಾಧಿಕಾರಿಗಳ ಜಂಟಿ ಸರ್ವೆ

ಚಿಕ್ಕಮಗಳೂರು, ಮೇ 4: ಸರ್ವೆ ನೆಪದಲ್ಲಿ ಜಿಲ್ಲಾಡಳಿತ ಕೃಷಿಕರಿಗೆ ತೊಂದರೆ, ಕಿರುಕುಳ ನೀಡುವುದನ್ನು ಮುಂದುವರಿಸಿದರೆ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು ಎಂದು ಕಿಸಾನ್ ಖೇತ್ ಮಜ್ದೂರು ಕಾಂಗ್ರೆಸ್‍ನ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನ ಕೃಷಿಕರು ಸುಪ್ರೀಕೋರ್ಟ್ ಹಾಗೂ ಸರಕಾರ ಅನೇಕ ಯೋಜನೆಗಳ ಹೆಸರಿನಲ್ಲಿ ಈಗಾಗಲೇ ಸಾಕಷ್ಟು ಕೃಷಿ ಜಮೀನುಗಳನ್ನು ಕಳೆದುಕೊಂಡಿದ್ದಾರೆ. ಇನ್ನೂ ಕೆಲ ಯೋಜನೆಗಳು ಜಿಲ್ಲೆಯ ಕೃಷಿಕರ ನೆತ್ತಿ ಮೇಲೆ ತೂಗುಕತ್ತಿಯಾಗಿ ಪರಿಣಮಿಸಿದ್ದು, ಒಕ್ಕಲೇಳುವ ಆತಂಕದಲ್ಲಿ ದಿನಕಳೆಯುತ್ತಿದ್ದಾರೆ. ಇದರ ನಡುವೆ ಇತ್ತೀಚೆಗೆ ಡೀಮ್ಡ್ ಫಾರೆಸ್ಟ್ ಹಾಗೂ ಕಂದಾಯ, ಅರಣ್ಯ ಭೂಮಿಗಳ ಗಡಿ ಗುರುತು ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅಧಿಕಾರಿಗಳ ತಂಡ ಜಂಟಿ ಸರ್ವೆಗೆ ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಮಲೆನಾಡಿ ಕೆಲ ಗ್ರಾಮಗಳಲ್ಲಿ ಕೃಷಿಕರ ಜಮೀನುಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಟ್ರೆಂಚ್ ನಿರ್ಮಿಸಿ ಕೃಷಿ ಜಮೀನಿನಲ್ಲಿದ್ದ ಕಾಫಿ, ಅಡಿಕೆ ಮರಗಳನ್ನು ನೆಲಸಮ ಮಾಡಿದ್ದಾರೆ. ಸರ್ವೆ ನೆಪದಲ್ಲಿ ಜಿಲ್ಲಾಡಳಿತ ಕೃಷಿಕರಿಗೆ ತೊಂದರೆ, ಕಿರುಕುಳ ನೀಡುವುದನ್ನು ಮುಂದುವರಿಸಿದರೆ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು ಎಂದರು.
ಕಂದಾಯ- ಅರಣ್ಯ ಭೂಮಿಗಳ ವರ್ಗೀಕರಣ ಮಲೆನಾಡಿನ ಗಂಭೀರ ಸಮಸ್ಯೆಯಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಯ ಯಾವ ಶಾಸಕರೂ ಗಂಭೀರವಾಗಿ ಚಿಂತನೆ ನಡೆಸಿಲ್ಲ. ಸರಕಾರದ ಬಳಿ ಈ ಸಮಸ್ಯೆ ಪರಿಹಾರಕ್ಕೆ ಒತ್ತಡವನ್ನೂ ಹಾಕಿಲ್ಲ. ಇದರ ಪರಿಣಾಮವಾಗಿ ಅಧಿಕಾರಿಗಳು ನ್ಯಾಯಾಲಯ, ಸರಕಾರದ ಆದೇಶಗಳನ್ನು ನೆಪ ಮಾಡಿಕೊಂಡು ಜಂಟಿ ಸರ್ವೇಗೆ ಮುಂದಾಗಿ ಬಡ ಕೃಷಿಕರ ಜಮೀನುಗಳನ್ನು ಅರಣ್ಯ ಎಂದು ನಮೂದಿಸುತ್ತಿದ್ದಾರೆ. ಕೊಪ್ಪ ತಾಲೂಕಿನ ಮೇಲ್ಪಾಲ್, ನುಗ್ಗಿ ಗ್ರಾಮಗಳ ವ್ಯಾಪ್ತಿಯ ಕೃಷಿ ಜಮೀನುಗಳಲ್ಲಿ ಟ್ರೆಂಚ್ ನಿರ್ಮಿಸಿ ರೈತರು ಬೆಳೆದ ಮರ, ಗಿಡಗಳನ್ನು ನೆಲಸಮ ಮಾಡುತ್ತಿದ್ದಾರೆ. ಇದರ ವಿರುದ್ಧ ಪಕ್ಷಾತೀತವಾದ ಸಂಘಟಿತ ಹೋರಾಟ ಅಗತ್ಯವಿದ್ದು, ಇಂತಹ ಹೋರಾಟಕ್ಕೆ ರೈತರು ಮುಂದಾದಲ್ಲಿ ಅದಕ್ಕೆ ನೇತೃತ್ವ ನೀಡಲು ತಾನು ಸಿದ್ಧನಿದ್ದೇನೆಂದು ಅವರು ತಿಳಿಸಿದರು.
ಒತ್ತುವರಿ ತೆರವು ಪ್ರಕ್ರಿಯೆ ಹಾಗೂ ಅರಣ್ಯ ಅಧಿಕಾರಿಗಳು ಆಧಾರ ರಹಿತವಾಗಿ ರೈತರ ಜಮೀನಿನಲ್ಲಿ ಟ್ರಂಚ್ ನಿರ್ಮಿಸುತ್ತಿರುವುದು ಗಂಭೀರವಾದ ಸಮಸ್ಯೆಯಾಗಿದೆ. ಸರಕಾರ ನ್ಯಾಯಾಲಯಗಳ ಆದೇಶ ಮುಂದಿಟ್ಟುಕೊಂಡು ರೈತರಿಗೆ ತೊಂದರೆ ನೀಡಿ, ರೈತರ ಜಮೀನನ್ನು ಅತಿಕ್ರಮಿಸಿದರೆ ಅಂತಹವರ ವಿರುದ್ಧ ಪಕ್ಷಾತೀತವಾಗಿ ರೈತರು ಹೋರಾಟಕ್ಕೆ ಇಳಿಯುವ ಮನೋಭಾವವನ್ನು ರೈತರು ಅಳವಡಿಸಿಕೊಳ್ಳಬೇಕು. ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪಕ್ಷಾತೀತವಾಗಿ ಹೋರಾಟ ನಡೆಸಬೇಕೆಂದ ಅವರು, ಕಂದಾಯ-ಅರಣ್ಯ ಜಮೀನುಗಳ ಸರ್ವೆ ನೆಪದಲ್ಲಿ ಕಾನೂನು ಮೀರಿ ವರ್ತಿಸುವ ಅರಣ್ಯಾಧಿಕಾರಿಗಳನ್ನು ಗಡಿಪಾರು ಮಾಡಲು ಮಲೆನಾಡು ಭಾಗದ ರೈತರು ಮುಂದಾಗಬೇಕು. ಜಿಲ್ಲೆಯ ಪ್ರಭಾವಿ ಶಾಸಕರು ಜಿಲ್ಲೆಯ ರೈತರಿಗೆ ಮರಣ ಶಾಸನದಂತಾಗಿರುವ ಈ ಸರ್ವೆ ಕಾರ್ಯವನ್ನು ತಡೆ ಹಿಡಿದು ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿರುವುದನ್ನು ರದ್ದುಪಡಿಸಲು ಕಾರ್ಯಪ್ರವೃತ್ತರಾಗಬೇಕೆಂದು ಸಚಿನ್ ಮೀಗಾ ಮನವಿ ಮಾಡಿದರು.
ಈ ಜಂಟಿ ಸರ್ವೆ ವಿರುದ್ಧ ಬಯಲು ಸೀಮೆಯ ರೈತರ ಹೋರಾಟದ ಮಾದರಿಯಲ್ಲಿಯೇ ಮಲೆನಾಡಿನ ರೈತರೂ ಹೋರಾಟಕ್ಕಿಳಿಯುವ ಆವಶ್ಯಕತೆ ಇದೆ. ಇಂತಹ ಹೋರಾಟಕ್ಕೆ ನೇತೃತ್ವ ವಹಿಸಲು ತಾನು ಬದ್ಧನಿದ್ದು, ಅಂತಹ ಸಂದರ್ಭಗಳಲ್ಲಿ ನನ್ನ ವಿರುದ್ಧ ಯಾವುದೇ ಮೊಕದ್ದಮೆ ದಾಖಲಿಸಿದರೂ ಅಥವಾ ಜೈಲಿಗೆ ಹಾಕಿದರೂ ಅದನ್ನು ಎದುರಿಸಿ, ರೈತರಿಗೆ ನ್ಯಾಯ ಒದಗಿಸಲು ನಾನು ಶಕ್ತನಾಗಿದ್ದೇನೆ. ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಹಲವಾರು ರೈತ ಹೋರಾಟಗಾರರಿಗೆ ರೈತರಿಂದ ನಿರೀಕ್ಷಿತ ಮಟ್ಟದಲ್ಲಿ ಸಹಕಾರ ಸಿಗದೇ ಹೋರಾಟದ ಕಿಚ್ಚು ತಣ್ಣಗಾಗಿದೆ. ರೈತರು ಇದನ್ನು ಮನವರಿಕೆ ಮಾಡಿಕೊಳ್ಳಬೇಕು.
ಯಾವುದೇ ಸರಕಾರವಿದ್ದರೂ ಅದು ರೈತರ ವಿರುದ್ಧವಾದ ನಿಲುವುಗಳನ್ನು ಕೈಗೊಂಡರೆ ರೈತರು ಅದರ ವಿರುದ್ಧ ಪಕ್ಷಾತೀತವಾಗಿ ಹೋರಾಡಲು ಬದ್ಧರಾಗಿರಬೇಕೆಂದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತವಿದ್ದಾಗ ಹಳದಿ ಎಲೆ ರೋಗಬಾದಿತ ಅಡಿಕೆ ಬೆಳೆಗಾರರ ಸಾಲ ಮನ್ನಾದ ಗೋರಕ್ ಸಿಂಗ್ ವರದಿಯನ್ನು ಅನುಷ್ಠಾನಗೊಳಿಸಬೇಕೆಂದು ತಾನು ಮತ್ತು ಇತರ ರೈತಪರ ಹೋರಾಗಾರರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಇನ್ನೂ ವಾದ-ವಿವಾದಗಳ ಹಂತದಲ್ಲಿದೆ. ರೈತರ ಒತ್ತುವರಿಯನ್ನು ತೆರವುಗೊಳಿಸುವಂತೆ ನ್ಯಾಯಾಲಯವು ಎಸ್.ಆರ್.ಹಿರೇಮಠ್ ಹೂಡಿದ್ದ ದಾವೆಯಲ್ಲಿ ಆದೇಶಿಸಿತ್ತು. ಅಂತಹ ಸಂದರ್ಭದಲ್ಲಿ ಎಸ್.ಆರ್.ಹಿರೇಮಠ್‍ರವರ ವಿರುದ್ಧವೇ ಕೋರ್ಟಿನಲ್ಲಿ ದಾವೆ ಹೂಡಿ ಈ ಆದೇಶವನ್ನು ರದ್ದು ಮಾಡಿಸಿ, 5 ಎಕರೆವರೆಗಿನ ಒತ್ತುವರಿ ತೆರವು ಮಾಡದಂತೆ ಹೊಸ ನ್ಯಾಯಾಲಯ ಹೊಸ ಆದೇಶವನ್ನು ನೀಡಿದೆ ಎಂದರು.
ಮಲೆನಾಡಿನ ರೈತರಿಗೆ ಇಂತಹ ಸಂಕಷ್ಠದ ಪರಿಸ್ಥಿತಿ ಒದಗಿಬರಲು ಈ ರೈತರಲ್ಲಿರುವ ಒಗ್ಗಟ್ಟಿನ ಹೋರಾಟದ ಕೊರತೆಯೇ ಕಾರಣವಾಗಿದೆ. ಚುನಾಯಿತ ಪ್ರತಿನಿಧಿಗಳು ಆದ್ಯತೆ ಮೇರೆಗೆ ಅರಣ್ಯ ಕಾಯ್ದೆಗಳನ್ನು ಅಧ್ಯಯನ ಮಾಡಿ ನಂತರ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು. ಈ ಹಿಂದೆ 2002ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ತಮ್ಮ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಐದು ತಾಲೂಕುಗಳ ವ್ಯಾಪ್ತಿಯಲ್ಲಿರುವ ಸುಮಾರು 1,38,000 ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿ ಡೀಮ್ಡ್ ಪಾರೆಸ್ಟ್ ಎಂದು ಘೋಷಿಸಿರುವುದು ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಕೂಡಲೇ ಜಿಲ್ಲೆಯ ಶಾಸಕರಾದ ಟಿ.ಡಿ.ರಾಜೇಗೌಡ, ಸಿ.ಟಿ.ರವಿ ಹಾಗೂ ಎಂ.ಪಿ ಕುಮಾರಸ್ವಾಮಿ ಅವರು ಸರಕಾರದ ಮೇಲೆ ಒತ್ತಡ ತಂದು ಸದ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಸರ್ವೆ ಕಾರ್ಯವನ್ನು ತಡೆ ಹಿಡಿದು ರೈತರು ಸಾಗುವಳಿ ಮಾಡಿದ ಜಮೀನಿನೊಳಗೆ ಅರಣ್ಯ ಇಲಾಖಾಧಿಕಾರಿಗಳು ಟ್ರಂಚ್ ನಿರ್ಮಿಸದಂತೆ ನೋಡಿಕೊಳ್ಳಬೇಕು. 2002ರಲ್ಲಿ ದುರುದ್ದೇಶದಿಂದ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಜಿಲ್ಲಾಧಿಕಾರಿ ವರ್ಗಾಯಿಸಿರುವುದನ್ನು ರದ್ದುಪಡಿಸಲು ಈ ಶಾಸಕರು ಕಾರ್ಯಪ್ರವೃತ್ತರಾಗಬೇಕು. ಇದನ್ನು ನಿರ್ಲಕ್ಷಿಸಿದಲ್ಲಿ ಈ ಶಾಸಕರ ಕಚೇರಿ/ನಿವಾಸಗಳ ಎದುರು ರೈತರ ಜತೆಗೂಡಿ ಅನಿರ್ದಿಷ್ಠಾವಧಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದ ಅವರು, ಅಧಿಕಾರಿಗಳಿಗೆ ಗಿಡಗಳನ್ನು ನೆಡಲು, ಪೋಷಿಸಲು ರಕ್ಷಿಸಲು ಅವಕಾಶವಿದೆಯೇ ಹೊರತು ರೈತರು ಬೆಳೆದ ಗಿಡ-ಮರಗಳನ್ನು ಕಡಿಯಲು ಕಾನೂನಿನಲ್ಲಿ ಅವಕಾಶವಿಲ್ಲ. ನ್ಯಾಯಾಲಯದ ಈ ಕಾನೂನಗಳನ್ನು ಅರಿತು ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಆಲ್ದೂರು ಕೃಷ್ಣೇಗೌಡ, ಈಶ್ವರ್, ಪ್ರಕಾಶ್ ರೈ ಉಪಸ್ಥಿತರಿದ್ದರು.







