ಪೊಲೀಸ್ ಭದ್ರತೆಯಲ್ಲಿ ಶನಿವಾರವೂ ಮುಂದುವರಿದ ಸಿಎಂ ಕುಟುಂಬದ ಯಾಗ
ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ

ಚಿಕ್ಕಮಗಳೂರು, ಮೇ 4: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆರೋಗ್ಯ ವೃದ್ಧಿ ಹಾಗೂ ಸಂಕಷ್ಟ ನಿವಾರಣೆಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಹಾಗೂ ದೇವೇಗೌಡ ಅವರು ಕುಟುಂಬ ಸಮೇತರಾಗಿ ಜಿಲ್ಲೆಯ ಕುಡ್ನಳ್ಳಿ ಗ್ರಾಮದ ಉಮಾಮಹೇಶ್ವರಿ ದೇವಾಲಯಕ್ಕೆ ಶುಕ್ರವಾರ ಸಂಜೆ ಆಗಮಿಸಿ ಹೋಮ, ಗಣಪತಿಯಾಗ ನಡೆಸಿದ್ದು, ಶನಿವಾರ ಇಡೀ ದಿನ ನಡೆದ ಪೂರ್ಣಾಹುತಿಯಾಗದಲ್ಲೂ ಪಾಲ್ಗೊಂಡ ಸಿಎಂ ಕುಟುಂಬ ಪೂಜೆ ಬಳಿಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.
ಶುಕ್ರವಾರ ಸಿಎಂ ಕುಮಾರಸ್ವಾಮಿ, ಸಚಿವ ರೇವಣ್ಣ ಹಾಗೂ ಮಾಜಿ ಪ್ರಧಾನಿ ಪೂಜೆಗೆ ಆಗಮಿಸುವ ಹಿನ್ನೆಲೆಯಲ್ಲಿ ಕೊಪ್ಪ ತಾಲೂಕಿನ ಕುಡ್ನಳ್ಳಿ ಉಮಾಮಹೇಶ್ವರಿ ದೇವಾಲಯದ ಸುತ್ತಮುತ್ತ ಬಿಗಿ ಪೊಲೀಸ್ ಸರ್ಪಗಾವಲನ್ನು ನಿಯೋಜಿಸಿ ಸಾರ್ವಜನಿಕರು ದೇವಾಲಯ ಪ್ರವೇಶವನ್ನು ನಿಷೇಧಿಸಿದ್ದ ಜಿಲ್ಲಾ ಪೊಲೀಸ್ ಇಲಾಖೆ ಶನಿವಾರವೂ ಪೂಜೆ ನಡೆಯುವ ಹಿನ್ನೆಲೆಯಲ್ಲಿ ಈ ನಿರ್ಬಂಧವನ್ನು ಮುಂದುವರಿಸಿತ್ತು.
ಕೊಪ್ಪ ಸಮೀಪದ ಸಿಎಂ ಆಪ್ತರ ಮನೆಯಲ್ಲಿ ತಂಗಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ರೇವಣ್ಣ, ದೇವೇಗೌಡ ಹಾಗೂ ಕುಟುಂಬದವರು ಶನಿವಾರ ಬೆಳಗ್ಗೆ ಉಮಾಮಹೇಶ್ವರಿ ದೇವಾಲಯದ ಆವರಣಕ್ಕೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಆಗಮಿಸಿದರು. ದಾರಿ ಮಧ್ಯೆ ಕುಮಾರಸ್ವಾಮಿ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ಸಿಎಂ ಭೇಟಿಗೆ ಮುಂದಾದರಾದರೂ ಪೊಲೀಸರು ಯಾರನ್ನೂ ಸಿಎಂ ಹತ್ತಿರಕ್ಕೆ ಬಿಡಲಿಲ್ಲ. ದೇವಾಲಯದ 200 ಮೀ. ದೂರದವರೆಗೆ ಪೊಲೀಸರು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದ ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಪೊಲೀಸರು ಚದುರಿಸುತ್ತಿದ್ದುದು ಶನಿವಾರ ಬೆಳಗ್ಗೆ ಕಂಡು ಬಂತು. ಇನ್ನು ಸಿಎಂ ಆಗಮನದ ಸುದ್ದಿ ಮಾಡಲು ಸ್ಥಳಕ್ಕೆ ತೆರಳಿದ್ದ ದೃಶ್ಯ ಮಾಧ್ಯಮದವರನ್ನೂ ಪೊಲೀಸರಿಗೂ ಪೊಲೀಸರು ನಿರ್ಬಂಧ ವಿಧಿಸಿದ್ದರು. ಸಿಎಂ ಹೇಳಿಕೆಗಾಗಿ ಶುಕ್ರವಾರದಿಂದ ಕಾಯುತ್ತಿದ್ದ ಮಾಧ್ಯಮದವರ ಕೈಗೆ ಶನಿವಾರ ಸಂಜೆ ವರೆಗೂ ಸಿಎಂ ಕುಟುಂಬದ ಯಾರೊಬ್ಬರೂ ಸಿಗಲಿಲ್ಲ. ಮಾಧ್ಯಮದವರಿಗೆ ವಿಡಿಯೊ, ಪೊಟೊ ತೆಗೆಯಲೂ ಪೊಲೀಸರು ಅಡ್ಡಿ ಪಡಿಸಿದರೆಂದು ತಿಳಿದು ಬಂದಿದ್ದು, ಪೊಲೀಸರ ವಿರುದ್ಧ ಕೆಲ ಜೆಡಿಎಸ್ ಕಾರ್ಯಕರ್ತರು, ಸಾರ್ವಜನಿಕರು ಅಸಮಾದಾನ, ಆಕ್ರೋಶ ವ್ಯಕ್ತಪಡಿಸಿದರು.
ದೇವಾಲಯಕ್ಕೆ ಆಗಮಿಸಿದ ಸಿಎಂ ಕುಟುಂಬದವರು ತುಂಗಾ ನದಿಯಲ್ಲಿ ಸ್ನಾನ ಮಾಡಿ ಬಳಿಕ ಉಮಾಮಹೇಶ್ವರಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಳಿಕ ದೇವಾಲಯದ ಮುಖ್ಯಸ್ಥ ಗಣೇಶ್ ಸೋಮಯಾಜಿ ನೇತೃತ್ವದಲ್ಲಿ ನಡೆದ ಪೂರ್ಣಾಹುತಿಯಾಗದಲ್ಲಿ ಪಾಲ್ಗೊಂಡರು. ಸಿಎಂ ಜತೆಯಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ಭೋಜೇಗೌಡ ಹಾಗೂ ಸ್ಥಳೀಯ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು. ಪೂಜೆಯ ಬಳಿಕ ಸಿಎಂ ಕುಟುಂಬದವರು ಬಿಗಿ ಪೊಲೀಸ್ ಭದ್ರತೆಯಲ್ಲಿ ಚಿಕ್ಕಮಗಳೂರು ಮಾರ್ಗವಾಗಿ ಹಾಸನದತ್ತ ತೆರಳಿದರು.







