ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ: ಜಿಲ್ಲಾಧಿಕಾರಿ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಮತ್ತೆ ಕೇರಳಕ್ಕೆ ಭಾರೀ ಮುಖಭಂಗ

ಚಾಮರಾಜನಗರ, ಮೇ 5: ದೇಶದಲ್ಲೇ ಅತೀ ಹೆಚ್ಚು ಹುಲಿಗಳ ವಾಸ ತಾಣವಾಗಿರುವ ಹಾಗೂ ದಕ್ಷಿಣ ಭಾರತದ ಸುಪ್ರಸಿದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ನಿಷೇಧ ಹೇರಿ ಜಿಲ್ಲಾಧಿಾರಿ ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಹೊಂದಿ ಕೊಂಡಿರುವ ಈ ಉದ್ಯಾನವನದ ಮೂಲಕ ಎರಡು ರಾಷ್ಟ್ರೀಯ ಹೆದ್ದಾರಿಗಳು ತಮಿಳುನಾಡು ಮತ್ತು ಕೇರಳ ರಾಜ್ಯಗಳ ಸಂಪರ್ಕ ಹೊಂದಿದೆ. ಅದರಲ್ಲಿ ಅತೀ ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿ 766ರ ಮೂಲಕ ಕೇರಳಕ್ಕೆ ವಾಹನ ಸಂಚಾರ ಇದೆ. 2009ರ ಮೊದಲು ಕೇರಳಕ್ಕೆ ರಾತ್ರಿ ವೇಳೆ ಸಂಚಾರಿಸುವ ವಾಹನಗಳಿಗೆ ಅನೇಕ ವನ್ಯ ಪ್ರಾಣಿಗಳು ಸಿಕ್ಕಿ ಸಾವನ್ನಪ್ಪುತ್ತಿದ್ದವು. ಇದನ್ನು ಗಮನಿಸಿದ ಅಂದಿನ ಚಾಮರಾಜನಗರ ಜಿಲ್ಲಾಧಿಾರಿ ಮನೋಜ್ ಕುಮಾರ್ ಮೀನಾ, ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು, ಬಂಡೀಪುರ ರಾಷ್ಟ್ರೀಯ ಉದ್ಯಾನವನ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ತನಕ ವಾಹನ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿದರು.
ಜಿಲ್ಲಾಧಿಕಾರಿಗಳ ಆದೇಶದಿಂದ ಕೆಂಡಮಂಡಲರಾದ ಕೇರಳ ಸರ್ಕಾರವು, ಜಿಲ್ಲಾಧಿಕಾರಿಗಳಿಗೆ ಆದೇಶ ಹಿಂಪಡೆಯುವಂತೆ ಒತ್ತಡ ತಂದಿದ್ದರು. ಬಳಕ ಹೈಕೋರ್ಟ್‍ಗೆ ಮನವಿ ಸಲ್ಲಿಸಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕೋರಿದ್ದರು. ಆದರೆ ಹೈಕೋರ್ಟ್ ಜಿಲ್ಲಾಧಿಕಾರಿಗಳ ಆದೇಶಕ್ಕೆ ಮನ್ನಣೆ ನೀಡಿದ್ದರಿಂದ ಬೇಸತ್ತ ಕೇರಳ ಸರ್ಕಾರವು, ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿತು. ಆದರೆ ಅಲ್ಲಿಯೂ ಸಹ ಕೇರಳ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದೆ.
ಕೇಂದ್ರ ಸರ್ಕಾರವು ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ವೇಳೆಯಲ್ಲಿ ವಾಹನಗಳ ಸಂಚಾರ ನಿಷೇಧ ಮಾಡಿದ್ದರ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಪಡೆದು, ಕರ್ನಾಟಕ ಸರ್ಕಾರ ಮತ್ತು ಅರಣ್ಯ ಹಾಗೂ ಪರಿಸರ ಇಲಾಖೆಯ ಅಧಿಕಾರಿಗಳಿಂದ ವರದಿ ಪಡೆದ ಬಳಿಕ ಸುಪ್ರ್ರಿಂ ಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಿದ್ದರಿಂದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅಫಿಡವಿಡ್‍ನ್ನು ಪರಿಶೀಲಿಸಿದ ಬಳಿಕ 2009 ರಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಮನೋಜ್ ಕುಮಾರ್ ರವರು ಆದೇಶಿಸಿದ್ದ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಮಾರ್ಗದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧವನ್ನು ಹಿಂಪಡೆಯಲು ಸಾಧ್ಯವಿಲ್ಲ, ಎಂದಿನಂತೆ ಆದೇಶ ಮುಂದುವರೆಸಲು ಸೂಚನೆ ನೀಡಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇದದಿಂದ ವನ್ಯ ಪ್ರಾಣಿಗಳ ಸ್ವಚ್ಚಂದ ವಿಹಾರಕ್ಕೆ ಅನುಕೂಲವಾಗಲಿದ್ದು, ಪ್ರಾಣಿಗಳ ಸಂತತಿ ಉಳಿಯುವಂತಾಗಿದೆ. ಯಾವುದೇ ಕಾರಣಕ್ಕೂ ಉದ್ಯಾನವನದೊಳಗೆ ರಾತ್ರಿ ವೇಳೆ ವಾಹನ ಸಂಚಾರ ಆರಂಭಿಸಬಾರದು. ಹಾಗೂ ಎಲಿವೆಯೇಟರ್‍ಗಳನ್ನು ಸಹ ನಿರ್ಮಾಣ ಮಾಡಬಾರದು.
- ಜೋಸೆಫ್ ಹೂವಾರ, ಪರಿಸರ ತಜ್ಞ







