ಅಪ್ತಾಪ್ತ ಬಾಲಕಿಯ ಮಾರಾಟ ಪ್ರಕರಣಕ್ಕೆ ತಿರುವು: ದೂರು ನೀಡಿದ್ದ ಅಳಿಯನ ವಿರುದ್ದವೇ ಕೇಸು ದಾಖಲು
ತಿಪಟೂರು, ಮೇ 04: ನಾದಿನಿ ಮತ್ತು ಆಸ್ತಿಯ ಮೇಲಿನ ಆಸೆಗೆ ತನಗೆ ಹೆಣ್ಣು ಕೊಟ್ಟ ಅತ್ತೆ, ಮಾವನ ವಿರುದ್ದವೇ 10 ಲಕ್ಷ ರೂಗಳಿಗೆ ಅಪ್ರಾಪ್ತ ಹೆಣ್ಣು ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಿದ ಅಳಿಯನ ವಿರುದ್ದ ಐಪಿಸಿ ಕಲಂ 323, 354, 504, 465 ಹಾಗೂ ಫೋಸ್ಕೋ ಕಾಯ್ದೆ 8 ರ ಅಡಿ ಪ್ರಕರಣ ದಾಖಲಿಸುವ ಮೂಲಕ ಪ್ರಕರಣಕ್ಕೆ ತಿರುವು ದೊರೆತಿದೆ.
ತಿಪಟೂರು ತಾಲೂಕಿನ ಲಿಂಗದಹಳ್ಳಿ ರಾಜಶೇಖರ್ ಎಂಬುವವರಿಗೆ ಗುಬ್ಬಿ ತಾಲೂಕು ಚೇಳೂರು ಬಳಿಯ ಕುರಿಹಳ್ಳಿ ಗ್ರಾಮದ ಬಸವಲಿಂಗಪ್ಪ ಅವರ ಮಗಳನ್ನು ವಿವಾಹ ಮಾಡಿಕೊಡಲಾಗಿತ್ತು. ವಿವಾಹವಾದ ದಿನದಿಂದಲೂ, ತನ್ನ ಹೆಂಡತಿಯ ತಂಗಿಯನ್ನು ತಮ್ಮ ಮನೆಯಲ್ಲಿಯೇ ರಾಜಶೇಖರ್ ಇರಿಸಿಕೊಂಡು, ಶಾಲೆಗೆ ಕಳುಹಿಸುತ್ತಿದ್ದರು. ಕಳೆದ ಒಂದೆರಡು ತಿಂಗಳ ಹಿಂದೆ ಬಸವಲಿಂಗಪ್ಪ ತಮ್ಮ ಮಗಳನ್ನು ಕುರಿಹಳ್ಳಿಗೆ ಕರೆತಂದಿದ್ದರು. ಇದಾದ ಕೆಲ ದಿನಗಳ ನಂತರ ಅಳಿಯ ರಾಜಶೇಖರ್ ಮಾಧ್ಯಮಗಳ ಮುಂದೆ ನಮ್ಮ ಮಾವ ಮತ್ತು ಅತ್ತೆ ಅಪ್ರಾಪ್ತೆಯಾದ ನನ್ನ ನಾದಿನಿಯನ್ನು ಬೇರೊಬ್ಬರಿಗೆ ಮದುವೆ ಮಾಡಿಕೊಟ್ಟಿರುವುದಲ್ಲದೆ, ಲೈಂಗಿಕವಾಗಿಯೂ ಬಳಸಿಕೊಳ್ಳಲು ಅಗ್ರಿಮೆಂಟ್ ಮಾಡಿಕೊಟ್ಟಿಕೊಟ್ಟಿದ್ದಾರೆ ಎಂದು ನೊಂದಾಯಿತ ವಲ್ಲದ ಸ್ಟಾಂಪ್ ಪೇಪರೊಂವೊಂದನ್ನು ಮಾಧ್ಯಮದವರಿಗೆ ನೀಡಿದ್ದರು.
ಇದೇ ವಿಚಾರವಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡ ನಂತರ ಎಚ್ಚೆತ್ತ ಚೇಳೂರು ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ ತನಿಖೆ ಆರಂಭಿಸಿ, ಕಣ್ಮರೆಯಾಗಿದ್ದ ಅಪ್ರಾಪ್ತ ಬಾಲಕಿಯನ್ನು ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸಿದ ನಂತರ, ಬಾವ ರಾಜಶೇಖರನ ಅಸಲಿ ಮುಖ ಬಯಲಾಗಿದ್ದು, ಆಸ್ತಿ ಮತ್ತು ನನ್ನ ಮೇಲಿನ ಆಸೆಗೆ ಇಡೀ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದುದಾಗಿ ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಚೇಳೂರು ಪೊಲೀಸರು, ನನ್ನ ನಾದಿನಿಯನ್ನು ಅವರ ತಂದೆ ತಾಯಿ, 10 ಲಕ್ಷ ರೂಗಳಿಗೆ ಮಾರಾಟ ಮಾಡಿದ್ದಾರೆ ಎಂದು ಗೋಳಾಡಿದ್ದ ರಾಜಶೇಖರನ ವಿರುದ್ದವೇ ಐಪಿಸಿ ಕಲಂ 323,354,504,465 ಹಾಗೂ ಪೋಸ್ಕೋ ಕಲಂ 8 ರ ಅಡಿಯಲ್ಲಿ ಕೇಸು ದಾಖಲಿಸಿ, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.







