ಬಹು ರಾಕೆಟ್ ಉಡಾವಕಗಳ ಪರೀಕ್ಷೆ: ಉ. ಕೊರಿಯ
ಪ್ಯಾಂಗ್ಯಾಂಗ್ (ಉತ್ತರ ಕೊರಿಯ), ಮೇ 5: ದೀರ್ಘವ್ಯಾಪ್ತಿಯ ಬಹು ರಾಕೆಟ್ ಉಡಾವಕಗಳು ಮತ್ತು ನಿರ್ದೇಶಿತ ಅಸ್ತ್ರಗಳನ್ನು ಪರೀಕ್ಷೆ ಮಾಡಿರುವುದಾಗಿ ಉತ್ತರ ಕೊರಿಯ ರವಿವಾರ ಹೇಳಿದೆ.
ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ಉತ್ತರ ಕೊರಿಯವು ತನ್ನ ಮೊದಲ ಕಿರು ವ್ಯಾಪ್ತಿಯ ಕ್ಷಿಪಣಿಯನ್ನು ಉಡಾಯಿಸಿದಂತೆ ಕಂಡುಬಂದ ಒಂದು ದಿನದ ಬಳಿಕ ಅದು ಈ ಪ್ರಕಟನೆ ಹೊರಡಿಸಿದೆ.
ಪ್ರಾಯೋಗಿಕ ಪರೀಕ್ಷೆಗಳನ್ನು ಶನಿವಾರ ನಡೆಸಲಾಯಿತು ಹಾಗೂ ನಾಯಕ ಕಿಮ್ ಜಾಂಗ್ ಉನ್ ಇದರ ಮೇಲುಸ್ತುವಾರಿ ವಹಿಸಿದರು ಎಂದು ಉತ್ತರ ಕೊರಿಯದ ಅಧಿಕೃತ ಸುದ್ದಿ ಸಂಸ್ಥೆ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜನ್ಸಿ (ಕೆಸಿಎನ್ಎ)ಯಲ್ಲಿ ಪ್ರಕಟಗೊಂಡ ಹೇಳಿಕೆ ತಿಳಿಸಿದೆ.
ಪರಮಾಣು ಮಾತುಕತೆಗಳಲ್ಲಿ ಬಿಕ್ಕಟ್ಟು ಉಂಟಾಗಿರುವ ಹೊರತಾಗಿಯೂ, ಕಿಮ್ ಜಾಂಗ್ ಉನ್ ‘ತನ್ನ ಮಾತನ್ನು ಮುರಿಯುವುದಿಲ್ಲ’ ಎಂಬ ವಿಶ್ವಾಸವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ ಬಳಿಕ ಈ ಪ್ರಕಟನೆ ಹೊರಬಿದ್ದಿದೆ.
ಜಪಾನ್ ಸಮುದ್ರ ಎಂಬುದಾಗಿ ಕರೆಯಲ್ಪಡುವ ಪೂರ್ವ ಸಮುದ್ರದಲ್ಲಿ ನಡೆಸಲಾದ ಪರೀಕ್ಷೆಗಳು, ಈ ಶಸ್ತ್ರಗಳ ಕಾರ್ಯನಿರ್ವಹಣಾ ಸಾಮರ್ಥ್ಯ ಮತ್ತು ನಿರ್ವಹಣೆಯ ನಿಖರತೆಯನ್ನು ಅಂದಾಜಿಸುವ ಉದ್ದೇಶವನ್ನು ಹೊಂದಿದ್ದವು ಎಂದು ಕೆಸಿಎನ್ಎ ತಿಳಿಸಿದೆ.