ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ: ಮೂವರು ಯುವ ಇಂಜಿನಿಯರ್‌ಗಳು ಸಾವು

ಬೆಂಗಳೂರು, ಮೇ 6: ಬೈಕ್‌ವೊಂದರಲ್ಲಿ ಸಾಗುತ್ತಿದ್ದ ವೇಳೆ, ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಮೂವರು ಇಂಜಿನಿಯರ್‌ಗಳು ಮೃತಪಟ್ಟಿರುವ ಘಟನೆ ಇಲ್ಲಿನ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಎಲ್)ದ ಇಂಜಿನಿಯರ್ ಕಾರ್ತಿಕ್(29), ಎಚ್‌ಎಎಲ್‌ನ ನಾಸಿಕ್ ಘಟಕದ ಇಂಜಿನಿಯರ್ ಅನಿಲ್(28) ಹಾಗೂ ಖಾಸಗಿ ಕಂಪೆನಿಯ ಸಾಫ್ಟ್‌ವೇರ್ ಇಂಜಿನಿಯರ್ ಶ್ರೀನಾಥ್(29) ಎಂಬುವರು ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿಗೆ ನಾಸಿಕ್‌ನಿಂದ ನಗರಕ್ಕೆ ಬಂದಿದ್ದ ಅನಿಲ್‌ನೊಂದಿಗೆ ಸ್ನೇಹಿತರಾದ ಶ್ರೀನಾಥ್ ಹಾಗೂ ಕಾರ್ತಿಕ್, ರವಿವಾರ ರಾತ್ರಿ 12:30ರ ವೇಳೆ ಹೊಟೇಲ್‌ವೊಂದರಲ್ಲಿ ಊಟ ಮುಗಿಸಿಕೊಂಡು ಬೈಕ್‌ನಲ್ಲಿ ಹೆಲ್ಮೆಟ್ ಹಾಕದೆ, ಚಾಲನೆ ಮಾಡಿದ್ದಾರೆ. ಈ ವೇಳೆ, ಮಾರ್ಗಮಧ್ಯೆ ನಗರದ ಸಿದ್ದಯ್ಯ ಪುರಾಣಿಕ್ ರಸ್ತೆಯಲ್ಲಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು, ವಿದ್ಯುತ್ ಕಂಬಕ್ಕೆ ಗುದ್ದಿ ಕೆಳಗೆ ಬಿದ್ದ ಮೂವರು ತಲೆಗೆ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಅತಿವೇಗವೇ ಈ ಘಟನೆಗೆ ಕಾರಣವಾಗಿದೆ. ಪ್ರಕರಣ ದಾಖಲಿಸಿರುವ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.







