ಬಿಬಿಎಂಪಿ ಉಪ ಚುನಾವಣೆ: ಜೆಡಿಎಸ್-ಕಾಂಗ್ರೆಸ್ ಮೈತ್ರಿ !

ಬೆಂಗಳೂರು, ಮೇ 6: ಅಕಾಲಿಕ ಮರಣದಿಂದ ತೆರವುಗೊಂಡಿರುವ ಬಿಬಿಎಂಪಿಯ 2 ವಾರ್ಡ್‌ಗಳಿಗೆ ಮೇ 29 ರಂದು ನಡೆಯಲಿರುವ ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಶಸ್ತ್ರ ಚಿಕಿತ್ಸೆ ಸಂಬಂಧ ಆಸ್ಪತ್ರೆಗೆ ದಾಖಲಾಗಿದ್ದ ಸಗಾಯಿಪುರಂ ವಾರ್ಡ್ ಸದಸ್ಯ ಏಳುಮಲೈ ಅಕಾಲಿಕವಾಗಿ ಮರಣ ಹೊಂದಿದ್ದರು. ಕಾವೇರಿಪುರ ವಾರ್ಡ್‌ನ ಸದಸ್ಯೆಯಾಗಿ ಆಯ್ಕೆಯಾಗಿ ಎರಡು ವರ್ಷಗಳ ಬಳಿಕ ಉಪ ಮೇಯರ್ ಆದ ಕೂಡಲೇ ರಮೀಳಾ ಉಮಾಶಂಕರ್ ಹೃದಯಾಘಾತದಿಂದ ನಿಧನ ಹೊಂದಿದ್ದರು. ಈ ಎರಡೂ ಕ್ಷೇತ್ರಗಳಿಗೆ ಇದೀಗ ಉಪ ಚುನಾವಣೆ ನಡೆಯುತ್ತಿದೆ.
198 ಸದಸ್ಯರಿರುವ ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಬಿಜೆಪಿಯು ಅಧಿಕಾರಕ್ಕೇರಲು ಸಾಧ್ಯವಾಗಿರಲಿಲ್ಲ. ಇದೀಗ ಪಕ್ಷೇತರ ಅಭ್ಯರ್ಥಿ ಏಳುಮಲೈ ಮತ್ತು ಜೆಡಿಎಸ್ ಸದಸ್ಯೆಯಾಗಿದ್ದ ರಮೀಳಾ ಉಮಾಶಂಕರ್‌ರ ಮರಣದಿಂದ ತೆರವುಗೊಂಡಿರುವ ಎರಡು ಕಡೆ ಬಿಜೆಪಿ ಗೆಲ್ಲುವ ಮೂಲಕ ಅಧಿಕಾರದ ಆಸೆ ಕಾಣುತ್ತಿದೆ. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಬಿಜೆಪಿ ಒಂಟಿಯಾಗಿ ಪ್ರಬಲ ಪೈಪೋಟಿ ನೀಡಲಿದೆ.
ನಾಲ್ಕು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು 5ನೆ ವರ್ಷ ಪೂರ್ಣಗೊಳಿಸಬೇಕಾದರೆ ಈ ಎರಡು ಸ್ಥಾನಗಳನ್ನು ಗೆಲ್ಲಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿವೆ. ಆದುದರಿಂದಾಗಿ ಸಗಾಯಿಪುರಂ ಮತ್ತು ಕಾವೇರಿಪುರ ವಾರ್ಡ್‌ನಲ್ಲೂ ಮೈತ್ರಿ ಮುಂದುವರೆಸಲು ಉಭಯ ಪಕ್ಷಗಳ ನಾಯಕರು ಒಪ್ಪಿದ್ದಾರೆ ಎನ್ನಲಾಗಿದೆ.
ಕಾವೇರಿಪುರ ವಾರ್ಡ್‌ನಿಂದ ಜೆಡಿಎಸ್, ಸಗಾಯಿಪುರಂ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣ್ಕಕಿಳಿಸಲು ನಿರ್ಣಯಿಸಿದ್ದು, ಸಗಾಯಿಪುರಂನಿಂದ ಏಳುಮಲೈ ಅವರ ಸಂಬಂಧಿಕರಿಗೆ ಕೈ ಟಿಕೆಟ್ ಸಿಗುವ ಸಾಧ್ಯತೆಗಳಿವೆ. ಅದೇ ರೀತಿ ಕಾವೇರಿಪುರ ವಾರ್ಡ್‌ನಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸೂಚಿಸುವ ಅಭ್ಯರ್ಥಿಗೆ ಟಿಕೆಟ್ ನೀಡಲಾಗುತ್ತದೆ ಎನ್ನಲಾಗುತ್ತಿದೆ.







