ಪದವಿ ವಿದ್ಯಾರ್ಥಿ ನಿಗೂಢ ಸಾವು

ಬೆಂಗಳೂರು, ಮೇ 6: ಬಿಬಿಎಂ ಪದವಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ದುರ್ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರ ಮೂಲದ ರಾಮಸ್ವಾಮಿ(21) ಮೃತ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎಂ ಓದುತ್ತಿದ್ದ ರಾಮಸ್ವಾಮಿ, ಮತ್ತಿಕೆರೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದ. ರಾಮಸ್ವಾಮಿಯನ್ನು ನೋಡಲು ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ತಂದೆ ಮೋಹನ್ ಸೋಮವಾರ ಬೆಳಗ್ಗೆ 5:30ರ ವೇಳೆ ಯಶವಂತಪುರದಲ್ಲಿ ರೈಲು ಇಳಿದು ಮಗನಿಗೆ ಮೊಬೈಲ್ ಕರೆ ಮಾಡಿದ್ದಾರೆ ಎನ್ನಲಾಗಿದೆ.
ಆದರೆ, ಕರೆ ಸ್ವೀಕರಿಸದಿದ್ದರಿಂದ ಮನೆಗೆ ಬಂದಿದ್ದು, ಬಾಗಿಲು ಮುರಿದು ನೋಡಿದಾಗ ಅಸ್ವಸ್ಥನಾಗಿ ರಾಮಸ್ವಾಮಿ ಬಿದ್ದಿದ್ದರು. ಕೂಡಲೇ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಾಮಸ್ವಾಮಿ ಅವರ ಸಂಶಯಾಸ್ಪದ ಸಾವಿಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.





