ನೀರಿನ ಬದಲಾಗಿ ನೀರು ಕೊಡಿ: ಮಹಾರಾಷ್ಟ್ರ ಜೊತೆ ನೀರು ಹಂಚಿಕೆಗೆ ಹೊಸ ಸೂತ್ರ- ಡಿ.ಕೆ.ಶಿವಕುಮಾರ್

ಬೆಳಗಾವಿ, ಮೇ 6: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಎದುರಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರ ಮುಂದಾಗಿದ್ದು, ಮಹಾರಾಷ್ಟ್ರ ಸರಕಾರದ ಜೊತೆ ನೀರು ಹಂಚಿಕೆ ಮಾಡಿಕೊಳ್ಳುವ ಹೊಸ ಮಾರ್ಗ ಕಂಡುಕೊಂಡಿದೆ.
ಸೋಮವಾರ ನಗರದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ಭಾಗಗಳ ನೀರಿನ ಸಮಸ್ಯೆ ಕುರಿತು ಆ ಭಾಗದ ಜನಪ್ರತಿನಿಧಿಗಳ ಸಭೆ ನಡೆಸಿದ ಬಳಿಕ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಪದೇ ಪದೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಸ್ಥಳೀಯ ಜನಪ್ರತಿನಿದಿಗಳು ಬೇಡಿಕೆ ಇಟ್ಟಿದ್ದಾರೆ ಎಂದು ಅವರು ಹೇಳಿದರು.
ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆಯನ್ನ ಕೊಟ್ಟಿದ್ದೇನೆ. ಆದರೆ, ಈ ಬಾರಿ 150ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲ ಆವರಿಸಿದೆ. ವಿಶೇಷವಾಗಿ ಕೃಷ್ಣಾ ನದಿ ಪಾತ್ರದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉದ್ಭವವಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರಕ್ಕೆ ನೀರು ಹರಿಸುವಂತೆ ಬೇಡಿಕೆಯನ್ನ ಇಟ್ಟಿದ್ದೇವೆ. ರಾಜ್ಯದ ಪರವಾಗಿ ನಾನು ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ್ದೇನೆ. ಎರಡು ಸರಕಾರದ ಅಧಿಕಾರಿಗಳು ಕೂಡಾ ಚರ್ಚೆ ಮಾಡಿದ್ದಾರೆ. ಬರಗಾಲ ಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಮಹಾರಾಷ್ಟ್ರ ನೀರು ಹರಿಸಲು ಆ ಸರಕಾರಕ್ಕೆ 2 ಕೋಟಿ ಹಣವನ್ನು ನೀಡಿದ್ದೇವೆ ಎಂದು ಅವರು ಹೇಳಿದರು.
ಇಷ್ಟು ದಿನಗಳ ಕಾಲ ನೀರು ಬಿಡಲು ಮಹಾರಾಷ್ಟ್ರ ಸರಕಾರ ಹಣ ಪಡೆಯುತ್ತಿತ್ತು. ಆದರೆ, ಈಗ ತಮಗೆ ಹಣ ಬೇಡ. ಬದಲಾಗಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ನೀರು ಬಿಡುವಂತೆ ಮನವಿ ಮಾಡಿದ್ದಾರೆ. ಹಿಪ್ಪರಗಿ ಜಲಾಶಯದಿಂದ ಜತ್ತ, ಜಾಂಬೋಟಿಗೆ ನೀರು ಹರಿಸುವಂತೆ ಮನವಿ ಮಾಡಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ಮಹಾರಾಷ್ಟ್ರ ಸರಕಾರದ ಮನವಿಗೆ ಸ್ಪಂದಿಸಿ ಶೀಘ್ರವೇ ಪತ್ರ ಬರೆಯುತ್ತೇನೆ. ಹೀಗೆ ಎರಡೂ ರಾಜ್ಯಗಳ ನಡುವೆ ನೀರು ಹಂಚಿಕೆ ಮಾಡಿಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಈ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಗಳ ನಡುವೆ ಒಪ್ಪಂದ ಮಾಡಿಕೊಳ್ಳಲು ಮಹಾರಾಷ್ಟ್ರ ಸರಕಾರ ಒಪ್ಪಿಕೊಂಡಿದೆ. ಇದರ ಸಾಧಕ ಬಾಧಕಗಳ ಕುರಿತು ಅಧಿಕಾರಿಗಳು ಚರ್ಚೆ ನಡೆಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರ ಸಿದ್ಧವಿದ್ದು, ಒಪ್ಪಂದಕ್ಕೆ ನಮ್ಮ ಸರಕಾರವೂ ಒಪ್ಪಿದೆ. ಎಲ್ಲೆಲ್ಲಿ ನೀರು ಉಳಿಸಿ ಮಹಾರಾಷ್ಟ್ರಕ್ಕೆ ನೀಡಬೇಕು ಎಂಬುದರ ಬಗ್ಗೆ ತಾಂತ್ರಿಕವಾಗಿ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ ಎಂದು ಅವರು ತಿಳಿಸಿದರು. ಸದ್ಯಕ್ಕೆ ಮಹಾರಾಷ್ಟ್ರ ಸರಕಾರ ನಾಲ್ಕು ಟಿಎಂಸಿ ನೀರನ್ನು ರಾಜಾಪೂರ ಜಲಾಶಯದಿಂದ ಬಿಡುಗಡೆ ಮಾಡಲು ಒಪ್ಪಿದೆ. ಮೇ 23ರ ನಂತರ ನೀರು ಬಿಡಲಾಗುತ್ತದೆ. ಅಲ್ಲಿಯವರೆಗೂ ಏನೂ ಮಾಡಲು ಸಾಧ್ಯವಿಲ್ಲ ಎಂದಿದೆ ಎಂದು ಶಿವಕುಮಾರ್ ಹೇಳಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಚಿವರಾದ ಆರ್.ಬಿ.ತಿಮ್ಮಾಪುರ, ವಿಧಾನ ಪರಿಷತ್ ಸದಸ್ಯರಾದ ಎಸ್.ಆರ್.ಪಾಟೀಲ್, ಹನುಮಂತ ನಿರಾಣಿ, ಮಹಾಂತೇಶ್ ಕವಟಗಿಮಠ, ಸಂಸದರಾದ ಪ್ರಕಾಶ್ ಹುಕ್ಕೇರಿ, ಪಿ.ಸಿ.ಗದ್ದಿಗೌಡರ್, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ, ಶಾಸಕರಾದ ಗಣೇಶ್ ಹುಕ್ಕೇರಿ, ಮಹಾಂತೇಶ್ ಕೌಜಲಗಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ಆನಂದ ನ್ಯಾಮಗೌಡ, ಸಿದ್ದು ಸವದಿ ಮತ್ತಿತರರು ಉಪಸ್ಥಿತರಿದ್ದರು.
ರೈತರಲ್ಲಿ ಮನವಿ
ಕುಡಿಯುವ ಉದ್ದೇಶಕ್ಕಾಗಿ ಪೂರೈಕೆ ಮಾಡುವ ನೀರನ್ನು ವ್ಯವಸಾಯಕ್ಕೆ ರೈತರು ಬಳಕೆ ಮಾಡಬಾರದು. ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ಅಗತ್ಯಕ್ಕಾಗಿ ನೀರು ಪಡೆಯಲಾಗುತ್ತಿದ್ದು, ಕೇವಲ ಕುಡಿಯಲಿಕ್ಕೆ ಮಾತ್ರ ಬಳಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
-ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ







