ಕಾವಳಪಡೂರಿನಲ್ಲಿ ನೀರಿನ ಸಮಸ್ಯೆ: ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರಿಂದ ಮನವಿ

ಬಂಟ್ವಾಳ, ಮೇ 6: ಕಾವಳಪಡೂರು ಪಂಚಾಯತ್ ವ್ಯಾಪ್ತಿಯ ಕಾಡಬೆಟ್ಟು ಗ್ರಾಮದ ಗೋಕಲ್, ಬೊಗ್ರಮೇರು, ಗುರಿಕಂಡ, ಅಜ್ಜಿಮೇರು ಪರಿಸದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಸೋಮವಾರ ಗ್ರಾಮ ಪಂಚಾಯತ್‍ಗೆ ಮನವಿ ಮಾಡಿದ್ದಾರೆ.
ಈ ಪರಿಸರದಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಖಾಸಗಿಯವರಿಗೆ ಹಣ ತೆತ್ತು ನೀರು ಪಡೆದುಕೊಳ್ಳಲಾಗುತ್ತಿದೆ. ಒಂದು ಸಾವಿರ ಲೀ. ನೀರಿಗೆ 350 ರೂ. ಹಣ ನೀಡಲಾಗುತ್ತಿದೆ. ಕೂಲಿ ಕಾರ್ಮಿಕರಾಗಿದ್ದು, ಬಡ ವರ್ಗದವರಾದ ನಾವು ನೀರಿಗಾಗಿ ಇಷ್ಟು ದುಬಾರಿ ವೆಚ್ಚ ಮಾಡಲು ಅಸಾಧ್ಯವಾಗಿದ್ದು, ಇದರಿಂದ ಮಕ್ಕಳ, ವೃದ್ಧರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದುದರಿಂದ ನಮಗೆ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಮನವಿಯಲ್ಲಿ ವಿವರಿಸಿದ್ದಾರೆ.
ಕಳೆದ 2 ದಶಕಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಮೌಖಿಕವಾಗಿ ಹಲವು ಬಾರಿ ದೂರು ನೀಡಿದ್ದರೂ ಯಾರೂ ಕೂಡಾ ಗಮನ ಹರಿಸಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಮನವಿ ಸ್ವೀಕರಿಸಿದ ಗ್ರಾಪಂ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಬಳಿ ಈ ಭಾಗದ ನೀರಿನ ಸಮಸ್ಯೆ ಬಗ್ಗೆ ದೂರವಾಣಿ ಮೂಲಕ ಮಾತನಾಡಿದರು. ತಾಪಂ ಕಾರ್ಯನಿರ್ವಣಾಧಿಕಾರಿ ಅವರ ಸೂಚನೆಯಂತೆ ಖಾಸಗಿಯವರಿಂದ ಪ್ರತಿದಿನ 2-3 ಟ್ಯಾಂಕರ್ ನೀರು ಸರಬರಾಜು ನಡೆಸಲಾಗುವುದು ಎಂದು ಗ್ರಾಮಸ್ಥರಲ್ಲಿ ಅವರು ತಿಳಿಸಿದರು.
ಈಗಾಗಲೆ ಇಲ್ಲಿ 2 ಕೊಳವೆ ಬಾವಿ ನಿರ್ಮಿಸಲಾಗಿದ್ದು, ವ್ಯರ್ಥವಾಗಿದೆ. ನೀರಿನ ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದ್ದು, ಮತ್ತೊಂದು ಕೊಳವೆ ಬಾವಿ ನಿರ್ಮಿಸಲು ವ್ಯವಸ್ಥೆ ನಡೆಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಗ್ರಾಮಸ್ಥರಾದ ದಾಮೋದರ ಗೋಕಲ್, ದೇಜಪ್ಪ ಗೋಕಲ್, ಭೋಜ, ಅರುಣಾ ಆಚಾರ್ಯ, ಮೀನಾಕ್ಷಿ ಗುರಿಕಂಡ, ರವೀಶ್ ಆಚಾರ್ಯ, ಗೋಪಾಲ ಪೂಜಾರಿ ಬೊಗ್ರುಮೇರು ಮತ್ತಿತರರು ಉಪಸ್ಥಿತರಿದ್ದರು.







