ಶಾಸಕರಿಗೆ ಬ್ಲಾಕ್ ಮೇಲ್ ಪ್ರಕರಣ: ಪತ್ರಕರ್ತ ಹೇಮಂತ್‌ನನ್ನು 7 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿದ ಕೋರ್ಟ್

ಬೆಂಗಳೂರು, ಮೇ 6: ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಬ್ಲಾಕ್ ಮೇಲ್ ಮಾಡಿ 50 ಲಕ್ಷ ರೂ.ಹಣಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಖಾಸಗಿ ಸುದ್ದಿ ವಾಹಿನಿವೊಂದರ ವ್ಯವಸ್ಥಾಪಕ ನಿರ್ದೇಶಕ ಹೇಮಂತ್‌ನನ್ನು 1ನೆ ಎಸಿಎಂಎಂ ನ್ಯಾಯಾಲಯ ಏಳು ದಿನಗಳ ಕಾಲ ಸಿಸಿಬಿ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಆರೋಪಿ ಹೇಮಂತ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಬೇಕೆಂದು ಕೋರ್ಟ್‌ನಲ್ಲಿ ಸಿಸಿಬಿ ಪೊಲೀಸರು ಮನವಿ ಮಾಡಿದ್ದರು. ಈ ಮನವಿಯನ್ನು ಆಲಿಸಿದ ನ್ಯಾಯಪೀಠವು ಏಳು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಆದೇಶಿಸಿದೆ. ಪತ್ರಕರ್ತ ಹೇಮಂತ್‌ನ ವಿರುದ್ಧ ಬ್ಲಾಕ್‌ಮೇಲ್ ಪ್ರಕರಣ ಗಂಭೀರವಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಬೇಕಾದ ಅವಶ್ಯಕತೆಯಿದೆ ಎಂದು ಸಿಸಿಬಿ ಪರ ವಕೀಲರು ನ್ಯಾಯಪೀಠಕ್ಕೆ ಮನವರಿಕೆ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಆರೋಪಿ ಹೇಮಂತನನ್ನು ಸಿಸಿಬಿ ವಶಕ್ಕೆ ನೀಡಿ ಆದೇಶಿಸಿದೆ.
ಮಾಜಿ ಸಚಿವ ಅರವಿಂದ ಲಿಂಬಾವಳಿಗೆ ಬ್ಲಾಕ್‌ಮೇಲ್ ಮಾಡಿದ್ದ ಪತ್ರಕರ್ತ ಹೇಮಂತ್, ನಿಮಗೆ ಸಂಬಂಧಿಸಿದ ಸಿಡಿ ನಮ್ಮ ಬಳಿ ಇದೆ. ಹಣ ಕೊಟ್ಟರೆ ಅದನ್ನು ಬಿಡುಗಡೆ ಮಾಡದೆ ಮ್ಯಾನೇಜ್ ಮಾಡುತ್ತೇನೆ ಎಂದು ಬ್ಲಾಕ್‌ಮೇಲ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಅರವಿಂದ್ ಲಿಂಬಾವಳಿ, ಪಿಎ ಗಿರೀಶ್ ಬಾರಧ್ವಾಜ್ ವೈಟ್‌ಫಿಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.





