ಮುಝಪ್ಫರ್‌ಪುರ ಆಶ್ರಯಧಾಮ ಪ್ರಕರಣ: ಜೂನ್ 3ರ ಒಳಗಡೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸಿಬಿಐಗೆ ಸುಪ್ರೀಂ ನಿರ್ದೇಶ

ಹೊಸದಿಲ್ಲಿ, ಮೇ 6: ಬಿಹಾರದ ಮುಝಪ್ಫರ್‌ಪುರದ ಆಶ್ರಯಧಾಮದಲ್ಲಿ ನಡೆದ 11 ಬಾಲಕಿಯರ ಕೊಲೆ ಪ್ರಕರಣದ ತನಿಖೆ ಬಗ್ಗೆ ಸ್ಥಿತಿಗತಿ ವರದಿಯನ್ನು ಜೂನ್ 3ರ ಒಳಗಡೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಸಿಬಿಐಗೆ ನಿರ್ದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರನ್ನು ಒಳಗೊಂಡ ಪೀಠ, ಪ್ರಕರಣದ ತುರ್ತು ಪರಿಗಣಿಸಿ ಜೂನ್ 3ರಂದು ರಜಾಕಾಲದ ಪೀಠ ಪ್ರಕರಣವನ್ನು ಆಲಿಸಲಿದೆ ಎಂದಿದೆ. ಸಿಬಿಐ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಮುಝಪ್ಫರ್‌ಪುರ ಆಶ್ರಯಧಾಮದಲ್ಲಿ 11 ಬಾಲಕಿಯರನ್ನು ಹತ್ಯೆಗೈಯಲಾಗಿದೆ. ಹೆಣಗಳನ್ನು ಹೂತ ಸ್ಥಳದಿಂದ ತನಿಖಾ ಸಂಸ್ಥೆ ಎಲುಬುಗಳನ್ನು ಪತ್ತೆ ಮಾಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಬ್ರಿಜೇಶ್ ಠಾಕೂರ್ ಹಾಗೂ ಆತನ ಸಹವರ್ತಿಗಳು 11 ಬಾಲಕಿಯರನ್ನು ಹತ್ಯೆಗೈದಿದ್ದಾರೆ. ಹೂತ ಸ್ಥಳದಲ್ಲಿ ಎಲುಬುಗಳು ಪತ್ತೆಯಾಗಿವೆ ಎಂದು ಮೇ 3ರಂದು ಸಿಬಿಐ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.
ಸರಕಾರೇತರ ಸಂಸ್ಥೆ ನಡೆಸುತ್ತಿದ್ದ ಆಶ್ರಯಧಾಮದಲ್ಲಿ ಹಲವು ಬಾಲಕಿಯರ ಮೇಲೆ ಅತ್ಯಾಚಾರ ಎಸಗಲಾಗಿದೆ ಹಾಗೂ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸಯನ್ಸ್‌ನ ವರದಿಯಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿತ್ತು.







