ಪುತ್ತೂರು ನಗರಸಭಾ ಸಮುದಾಯ ಸಂಘಟಕ ಉಸ್ಮಾನ್ ಬೊಳುವಾರುಗೆ ವಿದಾಯಕೂಟ

ಪುತ್ತೂರು: ನಗರ ಸಭಾ ಕಚೇರಿಯಲ್ಲಿ ಶಹರಿ ರೋಜ್‍ಗಾರ್ ಯೋಜನೆಯಲ್ಲಿನ ಸಮುದಾಯ ಸಂಘಟಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಉಸ್ಮಾನ್ ಬೊಳುವಾರು ಅವರಿಗೆ ಸ್ವರ್ಣೋದಯ ನಿರಂತರ ಉಳಿತಾಯ ಸಂಘಗಳ ಒಕ್ಕೂಟದ ವತಿಯಿಂದ ಸನ್ಮಾನ ಸಮಾರಂಭವು ಸೋಮವಾರ ನಗರ ಸಭಾ ಸಮುದಾಯ ಭವನದಲ್ಲಿ ನಡೆಯಿತು.
ನಿವೃತ್ತರನ್ನು ಸನ್ಮಾನಿಸಿದ ವಿರಾಜಪೇಟೆ ಪುರಸಭಾ ಮುಖ್ಯಾಧಿಕಾರಿ ಮತ್ತಡಿ ಕಾಯರ್‍ಪಲ್ಕೆ ಮಾತನಾಡಿ, ಸರ್ಕಾರಿ ಸೇವೆ ಮಾಡುವವರಿಗೆ ನಿವೃತ್ತಿ ಎಂಬುದು ಸಾಮಾನ್ಯ. ಆದರೆ ಉಸ್ಮಾನ್ ಅವರು ಕೇವಲ ಸರ್ಕಾರಿ ಸಂಬಳಕ್ಕೆ ಕೆಲಸವನ್ನು ಮೀಸಲಾಗಿರಿಸದೆ ಸರ್ವರ ಸೇವೆಯೆಂದು ಪರಿಗಣಿಸಿದ್ದರು.
ನೇರ ನಡೆ, ನುಡಿಯ ಮೂಲಕ ಜನರ ಜೊತೆ ಬೆರೆತುಕೊಂಡಿರುವ ಉಸ್ಮಾನ್‍ರವರು ಪ್ರಮಾಣಿಕತೆಯಿಂದ ಸೇವೆ ಸಲ್ಲಿಸಿರುತ್ತಾರೆ. ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಅರ್ಹರಾದ ಕಡು ಬಡವರಿಗೆ ತಲುಪಿಸುವಲ್ಲಿ ಉಸ್ಮಾನ್ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಉಸ್ಮಾನ್‍ರವರಂತಹ ಪ್ರಾಮಾಣಿಕ ಅಧಿಕಾರಿಗಳು ಕರ್ನಾಟಕದಲ್ಲಿ ದೊರೆಯಲು ಸಾಧ್ಯವಿಲ್ಲ ಎಂದರು.
ಪತ್ರಕರ್ತ ಸಂಶುದ್ದೀನ್ ಸಂಪ್ಯ ಮಾತನಾಡಿ ಇಲಾಖೆಗಳಿಗೆ ಬಹಳಷ್ಟು ಮಂದಿ ಅಧಿಕಾರಿಗಳು ಬಂದು ಹೋಗುತ್ತಾರೆ. ಆದರೆ ಎಲ್ಲರಿಗೂ ಸಾರ್ವಜನಿಕರ ಗೌರವ ಸಿಗುವುದಿಲ್ಲ. ಜನರಿಂದ ಗೌರವಿಸಲ್ಪಡುವ ಉಸ್ಮಾನ್‍ರವರಂತ ಅಧಿಕಾರಿಗಳು ದೊರೆಯುವುದು ಅಪರೂಪವಾಗಿದೆ. ಪರೋಪಕಾರ ಸ್ವಭಾವದರಾಗಿರುವ ಅವರು ಇನ್ನೊಬ್ಬರ ನೋವನ್ನು ಅರ್ಥಮಾಡಿಕೊಳ್ಳುವವರಾಗಿದ್ದರು. ಪ್ರಾಮಾಣಿಕ ಅಧಿಕಾರಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಮುಖಾಂತರ ಮನಸ್ಸು ಕಟ್ಟುವ ಕೆಲಸ ಮಾಡಿದ್ದಾರೆ. ಇಂತಹ ಅಧಿಕಾರಿಗಳು ದೊರೆಯುವುದು ತೀರಾ ಅಪರೂಪ. ಇಂತಹ ಅವಕಾಶ ಎಲ್ಲಾ ಅಧಿಕಾರಿಗಳಿಗೆ ದೊರೆಯುವುದಿಲ್ಲ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉಸ್ಮಾನ್ ಬೊಳುವಾರು ಮಾತನಾಡಿ, ಕರ್ತವ್ಯದ ಅವಧಿಯಲ್ಲಿ ನಾನು ಬಡವರ ಅಭ್ಯುದಯಕ್ಕಾಗಿ ಸರಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುತ್ತೇನೆ. ಸರಕಾರದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ ಜನರ ಸೇವೆ ಮಾಡುವಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಒಕ್ಕೂಟದ ಅಧ್ಯಕ್ಷೆ ಯಮುನಾ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ವ್ಯವಹಾರಾಧಿಕಾರಿ ಚಂದ್ರ ಕುಮಾರ್, ಒಕ್ಕೂಟದ ಉಪಾಧ್ಯಕ್ಷೆ ಪುಷ್ಪಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅರುಣಾ ಪ್ರಾರ್ಥಿಸಿದರು. ಭಾಗೀರಥಿ ಸ್ವಾಗತಿಸಿದರು. ಲತಾ ಕಾರ್ಯಕ್ರಮ ನಿರೂಪಿಸಿದರು.







