ರಾಜಕೀಯ ಕ್ಷೇತ್ರದಲ್ಲಿ ಶೇ.33 ರಷ್ಟು ಮಂದಿ ಅಪರಾಧ ಹಿನ್ನೆಲೆಯುಳ್ಳವರು: ನಟ ಅನಂತ್ ನಾಗ್
ಕವಲುದಾರಿ ಬೆಳ್ಳಿ ಸಿನೆಮಾ, ಬೆಳ್ಳಿ ಮಾತು ಸಂವಾದ

ಬೆಂಗಳೂರು, ಮೇ.6: ದೇಶದಲ್ಲಿ ಶೇ.33 ರಷ್ಟು ಅಪರಾಧ ಹಿನ್ನೆಲೆಯುಳ್ಳವರು ರಾಜಕೀಯ ಕ್ಷೇತ್ರದಲ್ಲಿ ಇರುವುದು ದುರಂತದ ಸಂಗತಿಯಾಗಿದೆ ಎಂದು ನಟ ಅನಂತ್‌ನಾಗ್ ವಿಷಾದ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ ‘ಕವಲುದಾರಿ ಬೆಳ್ಳಿ ಸಿನೆಮಾ, ಬೆಳ್ಳಿ ಮಾತು’ ಸಂವಾದದಲ್ಲಿ ಮಾತನಾಡಿದ ಅವರು, ಈಗ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಶೇ.33 ರಷ್ಟು ರಾಜಕರಣಿಗಳು ಅಪರಾಧ ಹಿನ್ನೆಲೆಯನ್ನು ಹೊಂದಿದ್ದಾರೆ. ಇಂತಹ ವಸ್ತು ವಿಷಯವನ್ನು ಕವಲುದಾರಿ ಚಲನಚಿತ್ರದಲ್ಲಿ ಬೆರೆಸಿ ಹದಗೊಳಿಸುವಲ್ಲಿ ಚಿತ್ರದ ನಿರ್ದೇಶಕ ಎಂ.ಹೇಮಂತ್ ರಾವ್ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಸ್ವಾತಂತ್ರ ಹೋರಾಟದ ಕಾಲಘಟ್ಟದಲ್ಲಿ ಚಕ್ರವರ್ತಿ ರಾಜಗೋಪಾಲಚಾರಿ ರಾಜಕೀಯ ಕ್ಷೇತ್ರದಲ್ಲಿ ಇರುವ ಅಪರಾಧಿಗಳ ವಿರುದ್ಧ ಮಾತನಾಡುತ್ತಿದ್ದರು. ನಂತರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅದರ ವಿರುದ್ಧ ಧ್ವನಿ ಎತ್ತಿದ್ದರು. ಈಗ ಅಂತಹ ಧ್ವನಿಯೇ ಇಲ್ಲವಾಗಿದೆ. ಅಲ್ಲದೆ, ಲೋಕಸಭೆ, ರಾಜ್ಯಸಭೆ, ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲೂ ಅಪರಾಧ ಹಿನ್ನೆಲೆಯುಳ್ಳವರು ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಈ ಬೆಳ್ಳಿ ಸಿನೆಮಾ, ಬೆಳ್ಳಿ ಮಾತು ಕಾರ್ಯಕ್ರಮ 47ನೇಯದಾಗಿದ್ದು, ಯಾವುದೇ ಒಂದು ಸಿನೆಮಾ ಕಲಾ ಸಿನೆಮಾವೇ ಆಗಿರಲಿ, ವಾಣಿಜ್ಯ ಸಿನೆಮಾವೇ ಆಗಿರಲಿ ಅದು ಸದಭಿರುಚಿಯ ಚಿತ್ರವಾದರೇ ಅಕಾಡೆಮಿಯು ಅಂತಹ ಚಲನಚಿತ್ರಗಳನ್ನು ಪ್ರದರ್ಶನ ಮಾಡುತ್ತದೆ. ಅಲ್ಲದೆ, ಉತ್ತಮವಾದ ಸಿನೆಮಾಗಳಲ್ಲಿ ಗಂಭೀರವಾದ ಪ್ರಯತ್ನವಿರುತ್ತದೆ ಎಂದರು.
ಸಿನೆಮಾದ ಕಥಾಹಂದರ: ವಿಜಯನಗರ ಕಾಲದ ಮಹತ್ವದ ಉತ್ಖನನ ನಡೆಸುವ ಪುರಾತತ್ವ ಇಲಾಖೆಯ ಪ್ರಾಮಾಣಿಕ ನೌಕರನ ಕುಟುಂಬದ ನಿಗೂಢ ಕೊಲೆ, ತನ್ನ ವ್ಯಾಪ್ತಿಗೆ ಬರದಿದ್ದರೂ ಆ ಕೊಲೆ ತನಿಖೆಗೆ ಮುಂದಾಗುವ ಸಂಚಾರ ಪೊಲೀಸ್ ಪೇದೆ, ಆತನಿಗೆ ನೆರವಾಗುವ ನಿವೃತ್ತ ಪೊಲೀಸ್ ಅಧಿಕಾರಿ, ಪ್ರಭಾವಿ ರಾಜಕಾರಣಿ! ಇವೆಲ್ಲ ಸಂಗತಿಗಳನ್ನೂ ಬೆಸೆದ ಪುನೀತ್ ರಾಜ್‌ಕುಮಾರ್ ನಿರ್ಮಾಣದ ಕವಲುದಾರಿ ನಿರೂಪಣೆಯಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಸಂವಾದದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಭೃಂಗೀಶ್, ಚಿತ್ರ ನಟ ರಿಷಿ, ಛಾಯಾಗ್ರಾಹಕ ಅದ್ವೈತಾ ಗುರುಮೂರ್ತಿ, ಚಿತ್ರ ತಂಡ ಹಾಗೂ ತಾಂತ್ರಿಕ ವರ್ಗದವರು ಉಪಸ್ಥಿತರಿದ್ದರು.







