ಪುಲ್ವಾಮ, ಶ್ರೀಲಂಕಾ ದಾಳಿ ನಂತರ ಹುಸಿ ಬಾಂಬ್ ಕರೆಗಳಲ್ಲಿ ಏರಿಕೆ

ಹೊಸದಿಲ್ಲಿ,ಮೇ.6: ಫೆಬ್ರವರಿ 14ರಂದು ನಡೆದ ಪುಲ್ವಾಮ ದಾಳಿ ಮತ್ತು ಈಸ್ಟರ್ ರವಿವಾರದಂದು ಶ್ರೀಲಂಕಾದಲ್ಲಿ ನಡೆದ ಸರಣಿ ಸ್ಫೋಟಗಳ ನಂತರ ವಿಮಾನ ನಿಲ್ದಾಣಗಳಲ್ಲಿ ಸ್ವೀಕರಿಸಲಾಗುವ ಹುಸಿ ಬಾಂಬ್ ಕರೆಗಳಲ್ಲಿ ದುಪ್ಪಟ್ಟಿಗಿಂತಲೂ ಹೆಚ್ಚಿನ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ತಿಂಗಳಲ್ಲಿ ಒಂದೋ ಎರಡೋ ಹುಸಿ ಬಾಂಬ್ ಕರೆಗಳು ಬರುತ್ತಿದ್ದರೆ ಈಗ ತಿಂಗಳಲ್ಲಿ ಐದರಿಂದ ಆರು ಕರೆಗಳು ಬರುತ್ತವೆ ಎಂದು ಬಹುತೇಕ ವಿಮಾನ ನಿಲ್ದಾಣಗಳಿಗೆ ಭದ್ರತೆ ಒದಗಿಸುವ ಕೇಂದ್ರ ಕೈಗಾರಿಕ ಭದ್ರತಾ ಪಡೆಯ ಅಧಿಕಾರಿ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿರುವ ನೂರು ವಿಮಾನ ನಿಲ್ದಾಣಗಳ ಪೈಕಿ 61ಕ್ಕೆ ಭದ್ರತೆ ಒದಗಿಸುವ ಸಿಐಎಸ್‌ಎಫ್ ಪ್ರಕಾರ, ವರ್ಷದಲ್ಲಿ 23-24 ಹುಸಿ ಬಾಂಬ್ ಕರೆಗಳು ಬಂದರೆ ಈ ಬಾರಿ ಈಗಾಗಲೇ ಈ ಸಂಖ್ಯೆ 24 ತಲುಪಿದೆ.
ಹೀಗೆ ಕರೆ ಮಾಡುವವರಲ್ಲಿ ಹೆಚ್ಚಾಗಿ ಇತರರೊಂದಿಗೆ ಹಗೆತನ ತೀರಿಸಿಕೊಳ್ಳಲು, ವೈಮಾನಿಕ ಸಂಸ್ಥೆಯಿಂದ ಕೆಟ್ಟದಾಗಿ ನಡೆಸಲ್ಪಟ್ಟವರು ಅಥವಾ ಕಿಡಿಗೇಡಿಗಳು ಭಾಗಿಯಾಗಿರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





