ಹೃದಯಾಘಾತದ ಅಪಾಯ ತಗ್ಗಿಸಲು ಬ್ಲಡ್ ಥಿನ್ನರ್ ಗಳು
ಕಡಿಮೆ ಡೋಸ್‌ನ ಬ್ಲಡ್ ಥಿನ್ನರ್ ಅಥವಾ ರಕ್ತವನ್ನು ತೆಳುವಾಗಿಸುವ ಔಷಧಿಯ ಬಳಕೆಯು ಹೃದಯ ವೈಫಲ್ಯದ ಅಪಾಯಗಳನ್ನು ಪರಿಣಾಮಕಾರಿಯಾಗಿ ಕಡಿಮೆಗೊಳಿಸುತ್ತದೆ ಎಂದು ನೂತನ ಅಧ್ಯಯನವೊಂದು ಬೆಳಕಿಗೆ ತಂದಿದೆ.
ಹೃದಯ ವೈಫಲ್ಯ,ಪರಿಧಮನಿ ಕಾಯಿಲೆ ಅಥವಾ ಅನಿಯಮಿತ ಹೃದಯ ಬಡಿತದಂತಹ ಗಂಭೀರ ಅಪಾಯಗಳನ್ನು ಎದುರಿಸುತ್ತಿರುವ ರೋಗಿಗಳಲ್ಲಿ ಬ್ಲಡ್ ಥಿನ್ನರ್‌ಗಳ ಬಳಕೆಯು ಅವರು ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಅಪಾಯಗಳಿಗೆ ತುತ್ತಾಗುವುದನ್ನು ಶೇ.17ರಷ್ಟು ತಗ್ಗಿಸುತ್ತದೆ ಎಂದು ಜೆಎಎಂಎ ಕಾರ್ಡಿಯಾಲಜಿ ಜರ್ನಲ್‌ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯು ತಿಳಿಸಿದೆ.
ಹೃದಯದ ಸ್ನಾಯು ಪರಿಣಾಮಕಾರಿಯಾಗಿ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಹೃದಯ ವೈಫಲ್ಯವು ಸಂಭವಿಸುತ್ತದೆ. ಪರಿಧಮನಿ ರೋಗ ಅಥವಾ ಅಧಿಕ ರಕ್ತದೊತ್ತಡದಿಂದ ಅಪಧಮನಿಗಳು ಸಂಕುಚಿತಗೊಂಡು ಕ್ರಮೇಣ ದುರ್ಬಲಗೊಳ್ಳುತ್ತವೆ. ಇದರಿಂದಾಗಿ ಹೃದಯಕ್ಕೆ ರಕ್ತಪೂರೈಕೆಗೆ ತೊಡಕುಂಟಾಗಿ ಅದು ಪೆಡಸಾಗುತ್ತದೆ ಮತ್ತು ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡುವ ಅದರ ಸಾಮರ್ಥ್ಯ ಕ್ಷೀಣಿಸುತ್ತದೆ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ.
ಹೃದಯದಿಂದ ಸಾಕಷ್ಟು ರಕ್ತ ಹೊರಗೆ ಪಂಪ್ ಆಗದೆ,ಪರಿಧಮನಿ ರೋಗದಿಂದ ಹೃದಯ ವೈಫಲ್ಯದ ಅಪಾಯದಲ್ಲಿರುವ ಶೇ.17ರಷ್ಟು ಪಾರ್ಶ್ವವಾಯು ಮತ್ತು ಹೃದಯಾಘಾತಗಳಂತಹ ಥ್ರೊಂಬೊಎಂಬಾಲಿಕ್ ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಎನ್ನುವುದು ಅಧ್ಯಯನದಲ್ಲಿ ಕಂಡು ಬಂದಿದೆ ಎಂದು ತಿಳಿಸಿರುವ ಸಂಶೋಧಕ ಬ್ಯಾರಿ ಗ್ರೀನ್‌ಬರ್ಗ್ ಅವರು,ಕಡಿಮೆ ಡೋಸ್‌ನ ಬ್ಲಡ್ ಥಿನ್ನರ್‌ಗಳ ಬಳಕೆಯಿಂದ ಥ್ರೊಂಬೊಸಿಸ್‌ನಿಂದ ಉಂಟಾಗುವ ಪಾರ್ಶ್ವವಾಯು,ಹೃದಯಾಘಾತ ಮತ್ತು ದಿಢೀರ್ ಹೃದಯಸ್ತಂಭನದ ಅಪಾಯಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದಿದ್ದಾರೆ. ಒಂದು ರಕ್ತನಾಳದಲ್ಲಿ ಹೆಪ್ಪುಗಟ್ಟಿದ ಕರಣೆಯು ಸಡಿಲಗೊಂಡು ರಕ್ತದೊಂದಿಗೆ ಸಾಗಿ ಇನ್ನೊಂದು ರಕ್ತನಾಳದಲ್ಲಿ ತಡೆಯನ್ನು ನಿರ್ಮಿಸುವುದನ್ನು ಥ್ರೊಂಬೊಸಿಸ್ ಎಂದು ಕರೆಯಲಾಗುತ್ತದೆ.