ನದಿಗೆ ಬಿದ್ದ ವಿಮಾನದ ವೇಗ ತಗ್ಗಿಸುವ ವ್ಯವಸ್ಥೆ ಕೆಟ್ಟಿತ್ತು: ಸಾರಿಗೆ ಸುರಕ್ಷಾ ಅಧಿಕಾರಿ

ಮಯಾಮಿ (ಅಮೆರಿಕ), ಮೇ 6: ವಿಮಾನ ಭೂಸ್ಪರ್ಶ ಮಾಡಿದ ಬಳಿಕ ಅದರ ವೇಗವನ್ನು ತಗ್ಗಿಸಲು ಸಹಾಯ ಮಾಡುವ ವ್ಯವಸ್ಥೆಯೊಂದು, ಅಮೆರಿಕದ ಫ್ಲೋರಿಡದಲ್ಲಿ ಇತ್ತೀಚೆಗೆ ರನ್‌ವೇಯಿಂದ ಜಾರಿ ನದಿಗೆ ಬಿದ್ದ ಬೋಯಿಂಗ್ 737 ವಿಮಾನದಲ್ಲಿ ಕೆಟ್ಟಿತ್ತು ಎಂದು ಉನ್ನತ ಸಾರಿಗೆ ಸುರಕ್ಷಾ ಅಧಿಕಾರಿಯೊಬ್ಬರು ರವಿವಾರ ಹೇಳಿದ್ದಾರೆ.
ಫ್ಲೋರಿಡದ ಜಾಕ್ಸನ್‌ವಿಲ್‌ನಲ್ಲಿರುವ ನೌಕಾಪಡೆಯ ವಿಮಾನ ನಿಲ್ದಾಣದಲ್ಲಿ ಶನಿವಾರ ಭೂಸ್ಪರ್ಶ ಮಾಡಿದ ವಿಮಾನವು ರನ್‌ವೇಯಿಂದ ಜಾರಿ ನದಿಗೆ ಬಿದ್ದಿರುವುದನ್ನು ಸ್ಮರಿಸಬಹುದಾಗಿದೆ. ಅದೃಷ್ಟವಶಾತ್, ವಿಮಾನದಲ್ಲಿದ್ದ ಎಲ್ಲ 143 ಮಂದಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ 21 ಮಂದಿಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.
ಕ್ಯೂಬಾದ ಗ್ವಾಂಟನಾಮೊದಲ್ಲಿರುವ ಅಮೆರಿಕದ ನೌಕಾ ನೆಲೆಯಿಂದ ಬರುತ್ತಿದ್ದ ವಿಮಾನವು ಬಿರುಗಾಳಿ, ಮಿಂಚು ಮತ್ತು ಮಳೆಯ ವಾತಾವರಣದಲ್ಲಿ ಭೂಸ್ಪರ್ಶ ನಡೆಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ವಿಮಾನದ ವೇಗವನ್ನು ನಿಧಾನಿಸುವ ‘ತ್ರಸ್ಟ್ ರಿವರ್ಸರ್’ಗಳ ಪೈಕಿ ಒಂದು ಕೆಟ್ಟಿತ್ತು ಎಂದು ಸಾರಿಗೆ ಸುರಕ್ಷಾ ಅಧಿಕಾರಿಗಳು ಹೇಳಿದ್ದಾರೆ.
ಮಳೆ ಮತ್ತು ಬಿರುಗಾಳಿಯಿಂದಾಗಿ ವಿಮಾನವನ್ನು ಮೇಲೆತ್ತುವ ಯತ್ನಗಳಿಗೆ ತಡೆಯಾಗಿದೆ.