10 ಲಕ್ಷ ಪ್ರಾಣಿ, ಸಸ್ಯ ಪ್ರಭೇದಗಳು ಅಳಿವಿನಂಚಿನಲ್ಲಿ: ವಿಶ್ವಸಂಸ್ಥೆ
ಪ್ಯಾರಿಸ್, ಮೇ 6: ಮಾನವ ಜನಾಂಗವು ನೈಸರ್ಗಿಕ ಜಗತ್ತನ್ನು ಕ್ಷಿಪ್ರವಾಗಿ ನಾಶಗೊಳಿಸುತ್ತಿದೆ, ಆದರೆ, ನಮ್ಮ ಸಮೃದ್ಧಿಯು ಹಾಗೂ ಅಂತಿಮವಾಗಿ ನಮ್ಮ ಅಸ್ತಿತ್ವವು ನೈಸರ್ಗಿಕ ಜಗತ್ತನ್ನೇ ಅವಲಂಬಿಸಿದೆ ಎಂದು ವಿಶ್ವಸಂಸ್ಥೆಯು ಸೋಮವಾರ ಬಿಡುಗಡೆ ಮಾಡಿದ ಪ್ರಾಕೃತಿಕ ಸ್ಥಿತಿಗತಿ ಅಧ್ಯಯನ ಹೇಳಿದೆ.
ದಶಕಗಳಿಂದ ಮಾಡಲಾದ ಅರಣ್ಯಗಳು, ಸಾಗರಗಳು, ಮಣ್ಣು ಮತ್ತು ವಾಯುವಿನ ಲೂಟಿ ಮತ್ತು ಅವುಗಳಿಗೆ ಹಾಕಿದ ವಿಷಗಳಿಂದ ಆಗಿರುವ ಬದಲಾವಣೆಗಳು, ‘‘ಕನಿಷ್ಠ ಹವಾಮಾನ ಬದಲಾವಣೆಯಷ್ಟೇ’ ಪ್ರಮಾಣದಲ್ಲಿ ಸಮಾಜಕ್ಕೆ ಬೆದರಿಕೆಯಾಗಿವೆ ಎಂದು 132 ದೇಶಗಳ ಸಭೆಯ ಅಧ್ಯಕ್ಷತೆ ವಹಿಸಿದ ರಾಬರ್ಟ್ ವಾಟ್ಸನ್ ಹೇಳಿದ್ದಾರೆ.
ಈ ಸಭೆಯಲ್ಲಿ, 450 ಪರಿಣತರು ವ್ಯಕ್ತಪಡಿಸಿದ ಅಭಿಪ್ರಾಯಗಳ ಆಧಾರದಲ್ಲಿ ಸರಕಾರಗಳಿಗಾಗಿ ವಿವಿಧ ಶಿಫಾರಸುಗಳನ್ನು ರೂಪಿಸಲಾಗಿದೆ.
ಸುಮಾರು 10 ಲಕ್ಷ ಪ್ರಾಣಿ ಮತ್ತು ಸಸ್ಯ ಪ್ರಭೇದಗಳು ಅಳಿವಿನಂಚಿಗೆ ಬಂದು ನಿಂತಿವೆ ಹಾಗೂ ಇವುಗಳ ಪೈಕಿ ಹೆಚ್ಚಿನವುಗಳು ದಶಕಗಳಲ್ಲೇ ಅಳಿಯಬಹುದು ಎಂದು ಪರಿಣತರು ವರದಿ ಮಾಡಿದ್ದಾರೆ.
ವಿಶಿಷ್ಟ ಜೀವರಾಶಿಗಳು ಕಣ್ಮರೆಯಾಗುತ್ತಿರುವ ವೇಗವು ಕಳೆದ ಒಂದು ಕೋಟಿ ವರ್ಷಗಳ ಅವಧಿಯಲ್ಲಿ ಇದ್ದಿದ್ದಕ್ಕಿಂತ ನೂರಾರು ಪಟ್ಟು ವೇಗದಲ್ಲಿ ಹೆಚ್ಚಿದೆ. ಇದು 6.6 ಕೋಟಿ ವರ್ಷಗಳ ಹಿಂದೆ ಡೈನೊಸಾರ್‌ಗಳು ನಿರ್ನಾಮಗೊಂಡ ನಂತರದ ಮೊದಲ ಸಾಮೂಹಿಕ ಅಳಿವಿನತ್ತ ಭೂಮಿಯನ್ನು ಒಯ್ಯಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಸದ್ಯಕ್ಕೆ ಮಾನವರು ಅಪಾಯ ಎದುರಿಸುತ್ತಿಲ್ಲ ಎಂದು ಜರ್ಮನಿಯ ಹೆಲ್ಮ್‌ಹೋಲ್ಟ್ಝ್ ಸೆಂಟರ್ ಫಾರ್ ಎನ್ವಿರಾನ್‌ಮೆಂಟಲ್ ರಿಸರ್ಚ್‌ನ ಪ್ರೊಫೆಸರ್ ಜೋಸೆಫ್ ಸೆಟಲ್ ಹೇಳುತ್ತಾರೆ. ‘‘ಆದರೆ, ದೀರ್ಘಾವಧಿಯಲ್ಲಿ ಇದೇ ಮಾತನ್ನು ಹೇಳಲು ಸಾಧ್ಯವಿಲ್ಲ’’ ಎಂದು ವಿಶ್ವಸಂಸ್ಥೆಯ ಜೀವವೈವಿಧ್ಯ ಮತ್ತು ಇಕೋಸಿಸ್ಟಮ್ ಸೇವೆಗಳ ಕುರಿತ ಅಂತರ್-ಸರಕಾರಿ ವಿಜ್ಞಾನ ನೀತಿ ವೇದಿಕೆಯ ಉಪಾಧ್ಯಕ್ಷರೂ ಆಗಿರುವ ಅವರು ಹೇಳಿದರು.