ಸಿಬಿಎಸ್‌ಸಿ: ಲಿಟ್ಲ್‌ರಾಕ್‌ಗೆ ಶೇ.100 ಫಲಿತಾಂಶ; ಧೃತಿ ಶೆಟ್ಟಿಗೆ ಶೇ.98.2 ಅಂಕ

ಬ್ರಹ್ಮಾವರ, ಮೇ 6: ಇಂದು ಪ್ರಕಟಗೊಂಡ ಈ ಬಾರಿಯ ಸಿಬಿಎಸ್‌ಸಿ 10ನೇ ತರಗತಿ ಫಲಿತಾಂಶದಲ್ಲಿ ಬ್ರಹ್ಮಾವರದ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ಮತ್ತೊಮ್ಮೆ ಅತ್ಯುತ್ತಮ ಸಾಧನೆ ಮಾಡಿದ್ದು, ಶೇ.100 ಫಲಿತಾಂಶವನ್ನು ದಾಖಲಿಸಿದೆ. ಕಳೆದ ವಾರ ಪ್ರಕಟಗೊಂಡ 12ನೇ ಸಿಬಿಎಸ್‌ಸಿ ಫಲಿತಾಂಶದಲ್ಲೂ ಲಿಟ್ಲ್‌ರಾಕ್ ಶೇ.100 ಫಲಿತಾಂಶ ದಾಖಲಿಸಿತ್ತು.
ಶಾಲೆಯಿಂದ ಪರೀಕ್ಷೆ ಬರೆದ ಎಲ್ಲಾ 250 ವಿದ್ಯಾರ್ಥಿಗಳು ತೇರ್ಗಡೆಗೊಂಡಿ ದ್ದಾರೆ. ಇವರಲ್ಲಿ 99 ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದರೆ, 89 ಮಂದಿ ಶೇ.80ರಿಂದ 89.9 ಅಂಕಗಳನ್ನೂ, 61 ವಿದ್ಯಾರ್ಥಿಗಳು ಶೇ.60ರಿಂದ 79.9 ಅಂಕಗಳನ್ನೂ, ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆ ಅಂಕ ವನ್ನು ಪಡೆದಿದ್ದಾನೆ.
ಧೃತಿ ಶೆಟ್ಟಿ ಟಾಪರ್: ಒಟ್ಟು ಶೇ.98.2 ಅಂಕಗಳನ್ನು ಪಡೆದ ಧೃತಿ ಶೆಟ್ಟಿ ಈ ಬಾರಿ ಲಿಟ್ಲ್‌ರಾಕ್‌ನ ಟಾಪರ್ ಆಗಿ ಹೊರಹೊಮ್ಮಿ ಹಿಂದಿನ ಎಲ್ಲಾ ದಾಖಲೆ ಗಳನ್ನು ಮುರಿದಿದ್ದಾರೆ. ಉಳಿದಂತೆ ರಿತಿಕಾ ಭಟ್ ಇಂಗ್ಲೀಷ್ ಭಾಷೆಯಲ್ಲಿ 100, ಮಧುರಾ ವಿ.ರಾವ್ ಗಣಿತದಲ್ಲಿ 100 ಅಂಕಗಳನ್ನು ಪಡೆದಿದ್ದಾರೆ. ಒಟ್ಟು 15 ಮಂದಿ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ1 ಅಂಕ ಪಡೆದಿದ್ದಾರೆ ಎಂದು ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಪ್ರೊ.ಮ್ಯಾಥ್ಯೂ ಸಿ.ನೈನಾನ್ ತಿಳಿಸಿದ್ದಾರೆ.
ಕ್ರೈಸ್ಟ್ ಸ್ಕೂಲ್‌ಗೆ ಶೇ.100: ಮಣಿಪಾಲದ ಅಲೆವೂರು ರಸ್ತೆಯಲ್ಲಿರುವ ಕ್ರೈಸ್ಟ್ ಸ್ಕೂಲ್ ಈ ಬಾರಿಯ ಸಿಬಿಎಸ್‌ಸಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶವನ್ನು ದಾಖಲಿಸಿದೆ.
ಶಾಲೆಯ ದೇವಿಕಾ ಶೆಣೈ (482-ಶೇ.96.4), ಶ್ರೇಯಸ್ ಪೈ (481-96.2), ಕೀರ್ತನಾ (476-95.2), ಆಕರ್ಷ್ ಪ್ರಭು (467-93.4) ನಿಧಿ(463-92.6), ಲಹರಿ(460-92), ಹೆಜಿಲ್ ಲೂಯಿಸಂ ರೊಸಾರಿಯೊ (458-91.6), ನಿಧಿ(458-91.6), ದುರ್ಗಾ ಆರ್.(453-90.6) ಅಂಕಗಳನ್ನು ಪಡೆದಿದ್ದಾರೆ ಶಾಲೆಯ ಪ್ರಕಟಣೆ ತಿಳಿಸಿದೆ.







