ವಾಯು ಶುದ್ಧೀಕರಣ ಸಾಧನಗಳಿಂದ ನಿರೀಕ್ಷಿತ ಫಲಿತಾಂಶ ಅಸಾಧ್ಯ
ಬೆಂಗಳೂರು, ಮೇ 6: ನಗರದಲಿ ಧೂಳಿನ ಪ್ರಮಾಣ ಕಡಿಮೆ ಮಾಡಲು ಪಾಲಿಕೆಯಿಂದ ಕೈಗೊಳ್ಳುತ್ತಿರುವ ವಾಯು ಶುದ್ಧೀಕರಣ ಸಾಧನಗಳ ಅಳವಡಿಕೆಯಿಂದ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ನಗರದಾದ್ಯಂತ ಅತಿಯಾದ ವಾಯು ಮಾಲಿನ್ಯದಿಂದಾಗಿ ಜನರು ವಿವಿಧ ಖಾಯಿಲೆಗಳಿಗೆ ತುತ್ತಾಗುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಆದರೆ, ಮಾಲಿನ್ಯ ನಿಯಂತ್ರಣದ ಸಂಬಂಧ ಬಿಬಿಎಂಪಿ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ.
ರಾಜ್ಯ ಸರಕಾರ ತನ್ನ ವಾರ್ಷಿಕ ಬಜೆಟ್‌ನಲ್ಲಿ ವಾಯು ಶುದ್ಧೀಕರಣ ಸಾಧನಗಳ ಅಳವಡಿಕೆಗೆ ಐದು ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಅಲ್ಲದೆ, ಖಾಸಗಿ ಕಂಪನಿಯೊಂದರ ಸಹಭಾಗಿತ್ವದಲ್ಲಿ ನಗರದ ಹಡ್ಸನ್ ವೃತ್ತದಲ್ಲಿ ಪ್ರಾಯೋಗಿಕವಾಗಿ ಒಂದು ಸಾಧನವನ್ನೂ ಅಳವಡಿಸಲಾಗಿದೆ. ಆದರೆ, ಪೂರ್ಣ ಪ್ರಮಾಣದಲಿ ಧೂಳನ್ನು ನಿಯಂತ್ರಿಸಲು ಇದರಿಂದ ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.
ನಗರದ ಧೂಳಿನ ಪ್ರಮಾಣ ಹಾಗೂ ಅದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು 2015ರಲ್ಲಿ ಹರ್ಬನ್ ಎಮಿಷನ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ನಗರದಲ್ಲಿ 21, 300 ಟನ್ ಧೂಳಿನ ಕಣಗಳಿರುವುದು ಪತ್ತೆಯಾಗಿತ್ತು. ಅದು ಈಗ ಮತ್ತಷ್ಟು ಹೆಚ್ಚಾಗಿದೆ. ಆದರೆ, ಪಾಲಿಕೆ ಈ ಕುರಿತು ಯಾವುದೇ ಪರಿಣಾಮಕಾರಿಯಾದ ಕ್ರಮಕ್ಕೆ ಮುಂದಾಗಿಲ್ಲ.
ನಗರದಲ್ಲಿ ಅಳವಡಿಸಲು ಉದ್ದೇಶಿಸಿರುವ ಶುದ್ಧೀಕರಣ ಸಾಧನಗಳಿಂದ 2.5 ಕೆ.ಜಿ.ಯಷ್ಟು ಧೂಳನ್ನು 20 ದಿನಗಳಲ್ಲಿ ಸಂಗ್ರಹ ಮಾಡುತ್ತದೆ. ವರ್ಷಕ್ಕೆ 45 ಕೆ.ಜಿ.ಯಷ್ಟು ಮಾತ್ರ ಸಂಗ್ರಹಿಸುತ್ತದೆ. ಉಳಿದದ್ದು ಏನು ಮಾಡಬೇಕು ಎಂಬ ಪ್ರಶ್ನೆಯಾಗಿದೆ. ಅಲ್ಲದೆ, ಈ ಲೆಕ್ಕದಲ್ಲಿ ನೋಡಿದರೆ ನಗರದಲ್ಲಿ ಇರುವ ಧೂಳಿನ ಕಣಗಳನ್ನು ಸಂಗ್ರಹಿಸಲು 4,67,105 ಶುದ್ಧೀಕರಣ ಸಾಧನಗಳು ಬೇಕಾಗುತ್ತವೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಸಾವಿರಾರು ಸಂಖ್ಯೆಯಲ್ಲಿ ಶುದ್ಧೀಕರಣ ಸಾಧನೆಗಳಿಗೆ ಕೋಟ್ಯಂತರ ರೂ.ಹಣ ಬೇಕು. ಆದರೆ, ಇದೀಗ ಮೀಸಲಿಟ್ಟಿರುವ ಹಣದಲ್ಲಿ ಅಂದಾಜು 200 ಸಾಧನಗಳಿಗೆ ಸಾಕಾಗುತ್ತದೆ. ಉಳಿದದ್ದನ್ನು ಏನು ಮಾಡಬೇಕು ಎಂದು ಅಧಿಕಾರಿಗಳು ಪ್ರಶ್ನಿಸುತ್ತಾರೆ.
ಕಣ್ಣಿಗೆ ಕಾಣದ ರೀತಿಯಲ್ಲಿ ಉಸಿರಾಟದ ಮೂಲಕ ಧೂಳಿನ ಕಣ (ಪಿ.ಎಮ್ 2.5) ಜನರ ದೇಹದ ಒಳಗೆ ಸೇರಿಕೊಳ್ಳುತ್ತಿದೆ. ಅದು ಶ್ವಾಸಕೋಶವನ್ನು ಸೇರಿಕೊಳ್ಳುತ್ತಿದ್ದು, ದೇಹದ ಹಲವು ಅಂಗಾಂಗಗಳಿಗೆ ಸಮಸ್ಯೆ ಉಂಟುಮಾಡುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಇದರ ಪ್ರಮಾಣ ಒಂದು ದಿನಕ್ಕೆ 60 ಮೈಕ್ರೋ ಗ್ರಾಂ ಫಾರ್ ಕ್ಯೂಬಿಕ್ ಮೀಟರ್ ಇರಬೇಕು ಆದರೆ, ಇದರ ಪ್ರಮಾಣ 100 ರಿಂದ 120 ದಾಟುತ್ತಿದೆ. ಅದರ ಸಾಮಾನ್ಯ ಪ್ರಮಾಣಕ್ಕಿಂತ ದುಪ್ಪಟ್ಟಾಗಿದೆ ಎಂದು ವೈದ್ಯರು ಹೇಳಿದ್ದಾರೆ.







