ಮ್ಯಾಕ್ಟ್‌ನಿಂದ 221 ಬೀದಿ ನಾಯಿಗಳ ದತ್ತು ನೀಡಿಕೆ

ಮಲ್ಪೆ, ಮೇ 6: ಇಲ್ಲಿನ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ (ಮ್ಯಾಕ್ಟ್) ರವಿವಾರ ಮಲ್ಪೆ ಬೀಚ್‌ನಲ್ಲಿ ಇಂಡಿಯನ್ ಡೆಂಟಲ್ ಎಸೋಸಿಯೇಶನ್‌ನ ಉಡುಪಿ ಶಾಖೆ ಸಹಯೋಗದಲ್ಲಿ ಬೀದಿನಾಯಿಗಳ ರಕ್ಷಣೆಗಾಗಿ ಅಪರೂಪದ ಅರ್ಥಪೂರ್ಣ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು.
ಬೀದಿನಾಯಿಗಳು ‘ನಮ್ಮ ಸ್ವಂತ ನಮ್ಮ ಹೆಮ್ಮೆ’ ಎಂಬ ಸಂಸ್ಥೆಯ ಅಭಿಯಾನ ದಂಗವಾಗಿ ಬೀದಿನಾಯಿ ಮರಿಗಳ ದತ್ತು ನೀಡುವ ಕಾರ್ಯ ಕ್ರಮವನ್ನು ನಡೆಸಿ, ಸುಮಾರು 14 ಮರಿಗಳನ್ನು ಆಸಕ್ತರು ದತ್ತು ಪಡೆದರು. ಈ ನಾಯಿ ಮರಿಗಳಿಗೆ ಚುಚ್ಚುಮದ್ದು, ಲಸಿಕೆ ಇತ್ಯಾದಿಗಳನ್ನು ಮುಂಚಿತವಾಗಿ ನೀಡಲಾಗಿತ್ತು.
ಇದರೊಂದಿಗೆ ಈ ಟ್ರಸ್ಟ್ ಮೂಲಕ ಕಳೆದ 10 ತಿಂಗಳಲ್ಲಿ ದತ್ತು ನೀಡಲಾದ ಬೀದಿ ನಾಯಿ ಮರಿಗಳ ಸಂಖ್ಯೆ 221 ಆಗಿದೆ ಎಂದು ಸಂಸ್ಥೆಯ ಸ್ಥಾಪಕಿ ಬಬಿತಾ ಮಧ್ವರಾಜ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಬೀದಿ ನಾಯಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶ ದಿಂದ ‘ಹಕ್ಕು’ ಎಂಬ ಬೀದಿ ನಾಟಕದ 3 ಪ್ರದರ್ಶನವನ್ನೂ ಆಯೋಜಿಸ ಲಾಗಿತ್ತು. ಬೀದಿ ನಾಯಿಗಳ ಕಷ್ಟ, ಅನುಭವಿಸುವ ನೋವು, ಆತಂಕ, ಅಸುರಕ್ಷತೆ ಗಳನ್ನು ನಾಟಕದಲ್ಲಿ ಬಿಂಬಿಸಲಾಗಿದ್ದು, ಇದು ನೋಡುಗರ ಕಣ್ಣನ್ನು ತೇವ ಗೊಳಿಸಿತು. ಮಾತ್ರವಲ್ಲ ನಾಟಕ ನೋಡಿದ ಅನೇಕರು ನಾಯಿಮರಿಗಳನ್ನು ದತ್ತು ತೆಗೆದುಕೊಂಡರು.
ಸುರೇಶ್ ನಾವೂರು ನಿರ್ದೇಶಿಸಿದ್ದ ಈ ನಾಟಕದಲ್ಲಿ ಉಡುಪಿಯ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು ಮತ್ತು ಏಂಜೆಲ್ಸ್ ಫಾರ್ ಸ್ಟ್ರೇ ಗ್ರೂಪ್‌ನ ಕಾರ್ಯಕರ್ತರು ನಟಿಸಿದ್ದರು. ರಂಗಭೂಮಿಯ ನಟ ರಾಮಾಂಜಿ ತಾಯಿ ಪಾತ್ರ ವಹಿಸಿದ್ದು, ನೋಡುವವರ ಮೆಚ್ಚುಗೆ ಪಾತ್ರವಾಯಿತು.
ಇಂಡಿಯನ್ ಡೆಂಟಲ್ ಎಸೋಸಿಯೇಶನ್ ಉಡುಪಿ ಶಾಖೆಯ ಅಧ್ಯಕ್ಷ ಡಾ.ಮನೋಜ್ ಮ್ಯಾಕ್ಸಿಂ ಸ್ವಾಗತಿಸಿದರು, ಪ್ರಾಸ್ತಾವಿಕ ಮಾತು ಗಳನ್ನಾಡಿದ ಬಬಿತಾ ಮಧ್ವರಾಜ್, ಇಷ್ಟೊಂದು ಸಂಖ್ಯೆಯಲ್ಲಿ ಬೀದಿನಾಯಿಗಳ ರಕ್ಷಣೆಗೆ ಮುಂದಾಗಿರುವ ಉಡುಪಿ ಬಹುಶಃ ದೇಶದಲ್ಲಿಯೇ ಪ್ರಥಮ ನಗರವಾಗಿ ರಬಹುದು. ಇದಕ್ಕೆ ಉಡುಪಿ ಜನತೆಯ ಕರುಣೆ ಮತು್ತ ಸಹಾನುಭೂತಿಯೇ ಕಾರಣ ಎಂದರು.








