ಸ್ವರ್ಣೆಯಲ್ಲಿ ನೀರಿನ ಹರಿವು ಇಲ್ಲದೆ ಬತ್ತಿದ ಬಜೆ ಅಣೆಕಟ್ಟು
► ಸದ್ಯ ಉಡುಪಿ ನಗರಕ್ಕೆ ನೀರಿಲ್ಲ ► ಇನ್ನೂ ಆರಂಭವಾಗದ ಡ್ರೆಜ್ಜಿಂಗ್

ಉಡುಪಿ, ಮೇ 6: ಉಡುಪಿ ನಗರಕ್ಕೆ ನೀರು ಪೂರೈಸುವ ಸ್ವರ್ಣ ನದಿಯ ಬಜೆ ಅಣೆಕಟ್ಟಿನಲ್ಲಿ ನೀರು ಸಂಪೂರ್ಣ ಬರಿದಾಗಿದ್ದು, ಮೇ 7ರಿಂದ ನೀರು ಸರಬರಾಜು ಮಾಡುವುದಾಗಿ ಹೇಳಿ ಎರಡು ದಿನಗಳಿಂದ ನೀರು ಸ್ಥಗಿತಗೊಳಿಸಿರುವ ನಗರಸಭೆ, ಈವರೆಗೆ ಸ್ವರ್ಣ ನದಿಯಲ್ಲಿ ಡ್ರೆಜ್ಜಿಂಗ್ ಕಾರ್ಯ ಆರಂಭಿಸಿಲ್ಲ. ಇದರ ಪರಿಣಾಮ ಮತ್ತೆ ಎರಡು ದಿನ ನಗರಕ್ಕೆ ನೀರು ಸರಬರಾಜು ಮರೀಚಿಕೆಯಾಗಲಿದೆ.
ಬಜೆ ಅಣೆಕಟ್ಟಿನಲ್ಲಿ ನೀರು ಖಾಲಿಯಾಗಿರುವುದರಿಂದ ನಗರಕ್ಕೆ ಮೇ 5 ಮತ್ತು 6ರಂದು ನೀರು ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ ಮತ್ತು ಮೇ 7ರಿಂದ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಪೌರಾಯುಕ್ತರು ಶನಿವಾರ ಪ್ರಕಟಣೆ ನೀಡಿದ್ದರು.
ರವಿವಾರದಿಂದ ನದಿಯ ತಳದಲ್ಲಿರುವ ಹೊಂಡದಲ್ಲಿ ಅಲ್ಲಲ್ಲಿ ನಿಂತಿರುವ ನೀರನ್ನು ಡ್ರೆಜ್ಜಿಂಗ್ ಮೂಲಕ ಬಜೆ ಅಣೆಕಟ್ಟಿನವರೆಗೆ ಹಾಯಿಸಿ ಮಂಗಳವಾರದಿಂದ ಮತ್ತೆ ನೀರನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ವಾಸ್ತವದಲ್ಲಿ ಡ್ರೆಜ್ಜಿಂಗ್ ಗುತ್ತಿಗೆ ವಹಿಸಿ ಕೊಂಡವರು ಸೋಮವಾರ ಮಧ್ಯಾಹ್ನದವರೆಗೆ ಸ್ವರ್ಣ ನದಿಯ ಯಾವುದೇ ಪ್ರದೇಶದಲ್ಲೂ ಡ್ರೆಜ್ಜಿಂಗ್ ಕಾರ್ಯ ಪ್ರಾರಂಭಿಸಿರುವುದು ಕಂಡುಬಂದಿಲ್ಲ. ಮೂಲಗಳ ಪ್ರಕಾರ ಗುತ್ತಿಗೆದಾರರು ಇಂದು ಸಂಜೆ ವೇಳೆ ಡ್ರೆಜ್ಜಿಂಗ್‌ಗೆ ಬೇಕಾದ ಬೋಟು ಹಾಗೂ ಯಂತ್ರಗಳನ್ನು ಸ್ಥಳಕ್ಕೆ ತಂದು ನಾಳೆಯಿಂದ ಕಾರ್ಯ ಆರಂಭಿಸಲಿದ್ದಾರೆ. ಆದುದರಿಂದ ನಾಳೆಯಿಂದ ನಗರಕ್ಕೆ ನೀರು ಪೂರೈಕೆ ಮಾಡುವುದು ಕಷ್ಟಸಾಧ್ಯವಾಗಿದೆ. ಇದರ ಪರಿಣಾಮ ಮತ್ತೆ ಎರಡು ದಿನ ನಗರಕ್ಕೆ ನೀರು ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.
ಭಂಡಾರಿಬೆಟ್ಟುವಿನಿಂದ ಡ್ರೆಜ್ಜಿಂಗ್: ಬಜೆ ಅಣೆಕಟ್ಟಿನಿಂದ ಸ್ವರ್ಣ ನದಿಯ ಸುಮಾರು ಮೂರು ಕಿ.ಮೀ. ಮೇಲಕ್ಕಿರುವ ಭಂಡಾರಿಬೆಟ್ಟು ಎಂಬಲ್ಲಿ ಹೂಳು ಹಾಗೂ ಬಂಡೆಯಿಂದಾಗಿ ಹರಿವು ಇಲ್ಲದೆ ನೀರು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಾಗಿದೆ. ಇಲ್ಲಿ ಸುಮಾರು ಐದಾರು ದಿನಗಳಿಗೆ ಬೇಕಾಗುವಷ್ಟು ನೀರಿನ ಸಂಗ್ರಹ ಇದೆ.
ಸದ್ಯ ನಗರಸಭೆಯು ಇಲ್ಲಿಂದ ಡ್ರೆಜ್ಜಿಂಗ್ ಕಾರ್ಯ ಆರಂಭಿಸಲಿದೆ. ಆ ಮೂಲಕ ನೀರನ್ನು ಪುತ್ತಿಗೆ ಮಠದ ಎದುರಿನಲ್ಲಿರುವ ನೀರಿನ ಸಂಗ್ರಹಕ್ಕೆ ಹಾಯಿಸ ಲಾಗುತ್ತದೆ. ಬಳಿಕ ಅಲ್ಲಿಂದ ಸ್ವಲ್ಪವೇ ದೂರದಲ್ಲಿರುವ ಬಜೆ ಅಣೆಕಟ್ಟಿಗೆ ನೀರನ್ನು ಡ್ರೆಜ್ಜಿಂಗ್ ಮೂಲಕ ತಂದು ಪಂಪಿಂಗ್ ಮಾಡುವ ಯೋಜನೆ ರೂಪಿಸ ಲಾಗಿದೆ. ಹೀಗೆ ಮಾಡಿದರೆ ಸುಮಾರು 10 ದಿನಗಳಿಗೆ ಬೇಕಾದ ನೀರು ಸಿಗಬಹುದೆಂಬುದು ಅಧಿಕಾರಿಗಳ ಅಂದಾಜು.
ಆದರೆ ಭಂಡಾರಿಬೆಟ್ಟು ಬದಲು ಬಜೆ ಅಣೆಕಟ್ಟಿನಿಂದ ಏಳೆಂಟು ಕಿ.ಮೀ. ದೂರದಲ್ಲಿರುವ ಶಿರೂರು ಸಾಣೆಕಲ್ಲು ಎಂಬಲ್ಲಿ ಸಂಗ್ರಹವಾಗಿರುವ ಸಾಕಷ್ಟು ಪ್ರಮಾಣದ ನೀರನ್ನು ಡ್ರೆಜ್ಜಿಂಗ್ ಮೂಲಕ ಹಾಯಿಸಿದರೆ ಮಳೆ ಬರುವವರೆಗೂ ನೀರು ಸಾಕಾಗಬಹುದು. ಆದರೆ ಭಂಡಾರಿಬೆಟ್ಟುವಿನಲ್ಲಿಯೇ ಇನ್ನು ಕೂಡ ಡ್ರಜ್ಜಿಂಗ್ ಕಾರ್ಯ ಆರಂಭಿಸಿಲ್ಲ. ಹೀಗೆ ಮಾಡಿದರೆ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸುರೇಂದ್ರ ನಾಯಕ್ ಸಾಣೆಬೆಟ್ಟು ತಿಳಿಸಿದ್ದಾರೆ.
ಅವೈಜ್ಞಾನಿಕ ಡ್ರೆಜ್ಜಿಂಗ್: ಮಳೆಯನ್ನೇ ನಂಬಿ ಕುಳಿತಿದ್ದ ಅಧಿಕಾರಿಗಳು ಮೇ ತಿಂಗಳವರೆಗೂ ಡ್ರೆಜ್ಜಿಂಗ್ ಕಾರ್ಯಕ್ಕೆ ಕೈ ಹಾಕಿಲ್ಲ. ಚುನಾವಣೆ ಬ್ಯುಸಿಯಲ್ಲಿದ್ದ ಅಧಿಕಾರಿಗಳು ಬಜೆಯಲ್ಲಿ ನೀರು ಸಂಪೂರ್ಣ ಬತ್ತಿ ಹೋದ ಬಳಿಕ ಇದೀಗ ಎಚ್ಚೆತ್ತುಕೊಂಡಿದ್ದಾರೆ.
ಮೂರು ಕಿ.ಮೀ. ದೂರದ ಭಂಡಾರಿಬೆಟ್ಟುವಿನಿಂದ ಡ್ರೆಜ್ಜಿಂಗ್ ಮೂಲಕ ನೀರು ಹಾಯಿಸುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಅದರ ಬದಲು ಏಳೆಂಟು ಕಿ.ಮೀ. ದೂರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಾಗಿರುವ ನೀರನ್ನು ಭಂಡಾರಿಬೆಟ್ಟುವರೆಗೆ ಹಾಯಿಸಿ ಬಜೆಗೆ ತರಬಹುದಾಗಿದೆ. ಒಂದು ವೇಳೆ ಸಕಾಲದಲ್ಲಿ ಮಳೆಯಾಗದಿದ್ದರೆ ಮತ್ತೆ ಏಳೆಂಟು ಕಿ.ಮೀ. ದೂರದಿಂದ ನೀರನ್ನು ಹಾಯಿಸಿ ತರಲು ಸಾಧ್ಯವಿಲ್ಲ. ಆದುದರಿಂದ ಮೊದಲೇ ಆ ಕಾರ್ಯ ಮಾಡಬೇಕಾಗುತ್ತದೆ.
‘ಮಾಣೈಯಿಂದ ಶಿರೂರು ಮಠದ ಗುಂಡಿಗೆ ಅಲ್ಲಿಂದ ಭಂಡಾರಿಬೆಟ್ಟುವಿಗೆ ನೀರು ಹಾಯಿಸಬೇಕು. ಡ್ರೆಜ್ಜಿಂಗ್ ಕಾರ್ಯವನ್ನು ಬಜೆಯಲ್ಲಿ ನೀರಿನ ಸಂಗ್ರಹ ಇಳಿಮುಖವಾಗುತ್ತಿದ್ದಂತೆಯೇ ಮಾಡಬೇಕಾಗಿತ್ತು. ಮೂರು ಕಿ.ಮೀ. ದೂರದ ನೀರನ್ನು ಡ್ರಜ್ಜಿಂಗ್ ಮೂಲಕ ತರಬೇಕಾದರೂ ಕನಿಷ್ಠ ಮೂರು ದಿನಗಳು ಬೇಕಾಗುತ್ತದೆ.’ಎನ್ನುತ್ತಾರೆ ಮಾಜಿ ನಗರಸಭೆ ಸದಸ್ಯ ಜನಾರ್ದನ ಭಂಡಾರ್ಕರ್.
2017ರಲ್ಲಿ ಎ.30ರಂದೇ ಬಜೆ ಖಾಲಿಯಾಗಿತ್ತು !
2017ರಲ್ಲಿ ಎ.30ರಂದೇ ಬಜೆಯಲ್ಲಿ ನೀರು ಖಾಲಿಯಾಗಿತ್ತು. ಇದರ ಪರಿಣಾಮ ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿತ್ತು. ನೀರಿನ ಸಂಗ್ರಹ ಇಳಿಮುಖ ಆಗುತ್ತಿರುವುದನ್ನು ಅರಿತ ಆಗಿನ ನಗರಸಭೆ ಆಡಳಿತವು ಎ.23 ರಿಂದ ಡ್ರೆಜ್ಜಿಂಗ್ ಕಾರ್ಯವನ್ನು ಆರಂಭಿಸಿತ್ತು.
ಅಂದು ಬಜೆ ಅಣೆಕಟ್ಟಿನಿಂದ ಏಳೆಂಟು ಕಿ.ಮೀ. ದೂರದಲ್ಲಿರುವ ಶಿರೂರು ಸಾಣೆಕಲ್ಲಿನ ನೀರ್‌ಮಾರ್ಪು ಎಂಬಲ್ಲಿಂದ ಎಂಟು ಬೋಟುಗಳಲ್ಲಿ ಸುಮಾರು 40 ದಿನಗಳ ಕಾಲ ಡ್ರೆಜ್ಜಿಂಗ್ ಕಾರ್ಯ ನಡೆಸಿ ನೀರನ್ನು ಹಾಯಿಸಲಾಗಿತ್ತು. ಕೆಲವು ಕಡೆ ನೀರಿನ ಹರಿವಿಗೆ ಅಡ್ಡಿಯಾಗಿದ್ದ ಬಂಡೆಯನ್ನು ಸ್ಪೋಟಿಸಲಾಗಿತ್ತು. ಅಲ್ಲದೆ ಆ ಸಂದರ್ಭದಲ್ಲಿ ಕೆಲವು ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗಿತ್ತು.
ಪಂಪಿಂಗ್‌ಗೆ 2 ಮೀ. ನೀರಿನ ಸಂಗ್ರಹ ಅಗತ್ಯ
ಬಜೆಯಲ್ಲಿ ಪ್ರಸ್ತುತ 2019ರ ಮೇ 6ರಂದು 1.10 ಮೀಟರ್ ನೀರಿನ ಸಂಗ್ರಹ ಇದ್ದರೆ, ಇದೇ ದಿನ 2018ರಲ್ಲಿ 3.10 ಮೀಟರ್ ಸಂಗ್ರಹ ಇತ್ತು. 2017ರಲ್ಲಿ ಎ.30ರಂದೇ ನೀರು ಖಾಲಿಯಾಗಿತ್ತು. ಅದೇ ರೀತಿ 2016ರಲ್ಲಿ 2.33 ಮೀಟರ್ ನೀರಿನ ಸಂಗ್ರಹ ಇತ್ತು.
ಬಜೆಯಲ್ಲಿ ನೀರು ಪಂಪಿಂಗ್ ಮಾಡಲು 1.70 ಮೀಟರ್ ಡೆಡ್‌ಲೈನ್ ಆಗಿದ್ದು, ಅದಕ್ಕಿಂತ ನೀರು ಇಳಿಕೆಯಾದರೆ ಪಂಪಿಂಗ್ ಮಾಡಲು ಸಾಧ್ಯವಿಲ್ಲ. ಮೇ 4ರಂದು ಬೆಳಗಿನ ಜಾವ 4ಗಂಟೆಗೆ ಕೊನೆಯ ಪಂಪಿಂಗ್ ಮಾಡಿದ್ದು, ಅದರ ನಂತರ ನೀರು ಪಂಪಿಂಗ್ ಮಾಡಲು ಸಾಧ್ಯವಾಗದಷ್ಟು ಇಳಿಕೆ ಕಂಡಿತ್ತು. ಅಲ್ಲಿಂದ ಈವರೆಗೆ ಪಂಪಿಂಗ್ ಕಾರ್ಯ ಮಾಡಿಲ್ಲ ಎನ್ನುತ್ತಾರೆ ಪಂಪಿಂಗ್ ಹೌಸ್‌ನ ಉಸ್ತುವಾರಿಗಳು.
ಇನ್ನು ಬಜೆ ಅಣೆಕಟ್ಟಿನಲ್ಲಿ 2 ಮೀಟರ್‌ನಷ್ಟಾದರೂ ನೀರಿನ ಸಂಗ್ರಹವಾದರೆ ಮಾತ್ರ ನೀರು ಪಂಪಿಂಗ್ ಮಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕೆಸರು ನೀರೇ ಬರುತ್ತದೆ. ಹರಿವು ಆರಂಭವಾದ ಕೂಡಲೇ ಪಂಪಿಂಗ್ ಕಾರ್ಯವನ್ನು ಆರಂಭಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
‘ಡ್ರೆಜ್ಜಿಂಗ್ ಗುತ್ತಿಗೆಯನ್ನು ಪಿಡಬ್ಲ್ಯೂಡಿ ಗುತ್ತಿಗೆದಾರ ಪ್ರವೀಣ್ ಎಂಬವರಿಗೆ ವಹಿಸಿಕೊಡಲಾಗಿದೆ. ಇಂದು ಎರಡು ಯಂತ್ರಗಳನ್ನು ಡ್ರೆಜ್ಜಿಂಗ್‌ಗೆ ಸಿದ್ಧತೆ ಗೊಳಿಸಲಾಗಿದೆ. ನಾಳೆಯಿಂದ ಡ್ರೆಜ್ಜಿಂಗ್ ಕಾರ್ಯ ಆರಂಭಿಸಿ ಮೇ 8ರಿಂದ ನೀರು ಸರಬರಾಜು ಮಾಡಲು ಪ್ರಯತ್ನಿಸಲಾಗುವುದು. ಸ್ವರ್ಣ ನದಿಯಲ್ಲಿ ಸಾಕಷ್ಟು ನೀರು ಇರುವುದರಿಂದ ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡುವ ಅವಶ್ಯಕತೆ ಎದುರಾಗುವುದಿಲ್ಲ’
-ಆನಂದ್ ಕಲ್ಲೋಳಿಕರ್, ಪೌರಾಯುಕ್ತರು, ನಗರಸಭೆ ಉಡುಪಿ










