ಬಂಡೀಪುರ ಅಭಯಾರಣ್ಯದಲ್ಲಿ ಕೃತಕ ಬೀಜ ಬಿತ್ತನೆ ಕಾರ್ಯ ಆರಂಭ

ಚಾಮರಾಜನಗರ, ಮೇ 6: ಕಿಡಿಗೇಡಿಗಳ ದ್ವೇಷದ ಕಿಚ್ಚಿಗೆ ಸುಟ್ಟು ಕರಕಲಾಗಿದ್ದ ರಾಷ್ಟ್ರೀಯ ಉದ್ಯಾನವನ ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಪುನಶ್ಚೇತನಗೊಳಿಸಿ ಹಸಿರೀಕರಣ ಮಾಡಲು ಅರಣ್ಯ ಇಲಾಖೆ ಪಣತೊಟ್ಟಿದ್ದು, ಬೀಜ ಬಿತ್ತನೆ ಕಾರ್ಯದಲ್ಲಿ ನಿರತವಾಗಿದೆ.
ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಹೊಂದಿಕೊಂಡಂತಿರುವ ಚಾಮರಾಜನಗರ ಜಿಲ್ಲೆಯ ವಿಶ್ವ ವಿಖ್ಯಾತ ಬಂಡೀಪುರ ಅಭಯಾರಣ್ಯದಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಕಿಗೇಡಿಗಳು ದ್ವೇಷದ ಕಿಡಿಗೆ ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿತ್ತು. ವನ್ಯಜೀವಿ ಸಂಕುಲಗಳ ಉಳಿವಿಗಾಗಿ ಅರಣ್ಯ ಇಲಾಖೆ ಸಾರ್ವಜನಿಕರ ಸಹಕಾರದಿಂದ ಬೆಂಕಿ ನಂದಿಸುವ ಕಾರ್ಯಚರಣೆ ನಡೆದಿದತ್ತು. ಬರಗಾಲದಿಂದ ತತ್ತರಿಸಿದ್ದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಈ ಬಾರಿಯ ಮುಂಗಾರು ನಿಧಾನ ಗತಿಯಲ್ಲಿ ಆರಂಭವಾಗಿದ್ದು, ಅಲ್ಲಲ್ಲಿ ಮಳೆಯಾಗಿದೆ. ಬಂಡಿಪುರ ಅರಣ್ಯ ಪ್ರದೇಶದಲ್ಲಿ ಬಿದ್ದ ಮಳೆಗೆ ಹಸಿರು ಕಾಣಿಸಿಕೊಳ್ಳುತ್ತಿದ್ದು, ಬರಡಾದ ಪ್ರದೇಶದಲ್ಲಿ ಅರಣ್ಯ ಇಲಾಖೆ ಸದ್ದಿಲ್ಲದೆ ಬೀಜ ಬಿತ್ತನೆ ಕಾರ್ಯಕ್ರಮದಲ್ಲಿ ತೊಡಗಿ ಪುನಶ್ಚೇತನಗೊಳಿಸಲು ಮುಂದಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿ ಬರಡಾಗಿದ್ದ ಅರಣ್ಯ ಪ್ರದೇಶದಲ್ಲಿ ಇದೀಗ ಬೀಜ ಬಿತ್ತನೆ ಕೆಲಸವನ್ನ ಅರಣ್ಯ ಇಲಾಖೆ ಸಿಬ್ಬಂದಿ ಕೈಗೊಂಡಿದ್ದಾರೆ. ಬಂಡೀಪುರ ಉದ್ಯಾನವನದ 13 ವಲಯಗಳಲ್ಲಿನ ಸಿಬ್ಬಂದಿಗಳ ಜೊತೆ ಸ್ವಯಂ ಸೇವಕರ ಸಹಕಾರ ಪಡೆದು ಕಳೆದ ಕೆಲವು ದಿನಗಳಿಂದ ಬೀಜ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡು, ಹಣ್ಣಿನ ಬೀಜಗಳು, ಹುಣಸೆ, ನೆಲ್ಲಿ, ಅಂಟುವಾಳ, ಬಿದಿರು ಸೇರಿದಂತೆ ವಿವಿಧ ಜಾತಿಯ ಬೀಜಗಳನ್ನ ಬಿತ್ತನೆ ಕೆಲಸವನ್ನು ಸಮಾರೊಪಾದಿಯಲ್ಲಿ ನಡೆಸುತ್ತಿದ್ದು, ಮಳೆಗಾಲ ಮುಗಿಯುವಷ್ಟರಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಳಿಸಲಾಗುವುದು. ಈಗಾಗಲೇ ಬಿದಿರು ಚಿಗುರುವ ಹಂತದಲ್ಲಿದ್ದು, ಈ ಹಿಂದಿನ ಬಂಡೀಪುರ ಮರುಕಳಿಸುತ್ತದೆ ಎನ್ನುತ್ತಾರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್.
ದೇಶದ ಪ್ರತಿಷ್ಠಿತ ಹುಲಿ ಯೋಜನೆ ಪ್ರದೇಶಗಳಲ್ಲಿ ಬಂಡಿಪುರ ಉದ್ಯಾನವನ ಎರಡನೇ ಸ್ಥಾನವನ್ನು ಹೊಂದಿದೆ. ಅರಣ್ಯ ಇಲಾಖೆಗೆ ಕಾಡ್ಗಿಚ್ಚು ಒಂದು ಸವಾಲಾಗಿದ್ದು, ವನ್ಯ ಜೀವಿ ಸಂಕುಲದ ಉಳಿವಿಗಾಗಿ ಹರಸಾಹಸ ಮಾಡುವಂತಾಗಿದೆ. ಎರಡು ತಿಂಗಳ ಹಿಂದಷ್ಟೆ ಬಿದ್ದ ಬೆಂಕಿಗೆ ಬಂಡೀಪುರ ಅರಣ್ಯ ಪ್ರದೇಶದ ಸಾವಿರಾರು ಎಕರೆ ಕಾಡು ನಾಶವಾಗಿದ್ದು, ಅದರಿಂದ ಜೀವನವನ್ನೆ ಕಳೆದುಕೊಂಡಂತಾಗಿತ್ತು. ಕಾಡಿನ ಜನರಾದ ನಮಗೆ ಕಾಡು ಬೇಕು, ಅದಕ್ಕಾಗಿ ನಾವು ಬೀಜ ಬಿತ್ತನೆ ಕಾರ್ಯದಲ್ಲಿ ಅರಣ್ಯ ಇಲಾಖೆ ಜೊತೆಯಲ್ಲಿ ಸೇರಿ ಬೀಜ ಬಿತ್ತನೆ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಗಿರಿಜನ ಹಾಡಿಯ ಸೋಮು.
ಈ ನಡುವೆ ಬಂಡೀಪುರ ಅಭಯಾರಣ್ಯದಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ ಬಿತ್ತನೆ ಬೀಜ ಹಾಕಿ ಗಿಡಗಳನ್ನು ಬೆಳಸುವ ಕಾರ್ಯಕ್ಕೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅಪಸ್ವರ ಎತ್ತಿದ್ದಾರೆ. ಕಾಡಿನಲ್ಲಿ ಬೀಜ ಬಿತ್ತನೆ ಮಾಡಿ ಗಿಡ ಬೆಳಸುವ ಬದಲು, ಇರುವ ಅರಣ್ಯ ಪ್ರದೇಶವನ್ನು ಸಂರಕ್ಷಿಸಿಕೊಳ್ಳುವ ಹಾದಿಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಪ್ರಕೃತಿದತ್ತವಾಗಿ ಬೆಳೆಯುವ ಕಾಡಿಗೂ, ಬೀಜ ಬಿತ್ತನೆ ಮಾಡಿ ಬೆಳಸುವ ಕಾಡಿಗೂ ವ್ಯತ್ಯಾಸ ಇದೆ. ಪ್ರಸ್ತುತ ಬಂಡೀಪುರದಲ್ಲಿ ಬೀಜ ಬಿತ್ತನೆ ಕಾರ್ಯ ಮಾಡುತ್ತಿರುವುದು ಅವೈಜ್ಞಾನಿಕ ಎಂದು ಅಸಮಧಾನ ವ್ಯಕ್ತಪಡಿಸಿದರು.








