ಬೋಫೋರ್ಸ್ ಆರೋಪಿ ರಾಜೀವ್ ಗಾಂಧಿ ಹೆಸರಲ್ಲಿ ಚುನಾವಣೆಗೆ ಸ್ಪರ್ಧಿಸಿ: ಕಾಂಗ್ರೆಸ್ಗೆ ಮೋದಿ ಸವಾಲು
ಹೊಸದಿಲ್ಲಿ, ಮೇ.6: ಸದ್ಯ ಬಾಕಿಯುಳಿದಿರುವ ಲೋಕಸಭಾ ಚುನಾವಣೆಯ ಎರಡು ಹಂತಗಳನ್ನು ರಾಜೀವ್ ಗಾಂಧಿಯ ಹೆಸರಲ್ಲಿ ಎದುರಿಸುವಂತೆ ಪ್ರಧಾನಿ ಮೋದಿ ಸೋಮವಾರ ಕಾಂಗ್ರೆಸ್ಗೆ ಸವಾಲೆಸೆದಿದ್ದಾರೆ. ರಾಜೀವ್ ಗಾಂಧಿ ಭ್ರಷ್ಟಾಚಾರಿ ನಂ.1 ಎಂಬ ಮೋದಿ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾರೆ.
“ನಾನು ನಾಮಧಾರಿ ಕುಟುಂಬಕ್ಕೆ ಸವಾಲು ಹಾಕುತ್ತೇನೆ. ಸೋಮವಾರದ ಮತದಾನ ಮುಗಿದಿದೆ. ಆದರೆ ಇನ್ನೂ ಎರಡು ಹಂತಗಳು ಬಾಕಿಯಿವೆ. ನಿಮಗೆ ಸಾಧ್ಯವಿದ್ದರೆ ಅವುಗಳನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಪರಿಪೂರ್ಣತೆಯ ವಿಷಯದ ಆಧಾರದಲ್ಲಿ ಎದುರಿಸಿ” ಎಂದು ಮೋದಿ ಜಾರ್ಖಂಡ್ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ಸವಾಲೆಸೆದಿದ್ದಾರೆ.
ಇದಕ್ಕೂ ಮೊದಲು ತನ್ನ ಹೇಳಿಕೆಯಲ್ಲಿ ಮೋದಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಭ್ರಷ್ಟಾಚಾರಿ ನಂ.1 ಎಂದು ಕುಟುಕಿದ್ದರು. ನಿಮ್ಮ ತಂದೆಯನ್ನು ಅವರ ಹಿಂಬಾಲಕರು ಮಿ. ಕ್ಲೀನ್ ಎಂದು ವ್ಯಾಖ್ಯಾನಿಸುತ್ತಾರೆ. ಆದರೆ ಅವರ ಜೀವನ ಭ್ರಷ್ಟಾಚಾರಿ ನಂ.1 ಆಗಿಯೇ ಕೊನೆಯಾಯಿತು ಎಂದು ಮೋದಿ ರಾಹುಲ್ ಗಾಂಧಿಗೆ ಕುಟುಕಿದ್ದರು.