ಕ್ರೀಡೆಯ ಮೂಲಕ ಮಾದಕ ದ್ರವ್ಯಸೇವನೆ ವಿರುದ್ಧಸಮರ ಸಾರಿದ ಬಾಕ್ಸರ್ ಸರಿತಾದೇವಿ

ಹೊಸದಿಲ್ಲಿ, ಮೇ 6: ಭಾರತದ ಹಿರಿಯ ಬಾಕ್ಸರ್ ಸರಿತಾದೇವಿ ಬ್ಯಾಂಕಾಕ್‌ನಲ್ಲಿ ಎ.26 ರಂದು ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 8ನೇ ಪ್ರಶಸ್ತಿ ಜಯಿಸಿದರು. 37ರ ಹರೆಯದ ಸರಿತಾದೇವಿ 18 ವರ್ಷಗಳ ಹಿಂದೆ ಬ್ಯಾಂಕಾಕ್‌ನಲ್ಲೇ ಮೊದಲ ಅಂತರ್‌ರಾಷ್ಟ್ರೀಯ ಪದಕ ಜಯಿಸಿದ್ದರು. ಬಾಕ್ಸಿಂಗ್‌ನಲ್ಲಿ ಮಿಂಚುವ ಜೊತೆಗೆ ತನ್ನ ಹಳ್ಳಿಯ ಮಕ್ಕಳು ಮಾದಕ ದ್ರವ್ಯ ವ್ಯಸನಿಯಾಗುತ್ತಿರುವುದನ್ನು ತಪ್ಪಿಸಲು ತನ್ನ ಹೆಸರಿನಲ್ಲಿ ಬಾಕ್ಸಿಂಗ್ ಅಕಾಡಮಿಯನ್ನು ಸ್ಥಾಪಿಸಿದ್ದು, ಇದರಲ್ಲಿ ಈಗ 70 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ಈ ಅಕಾಡಮಿಯಲ್ಲಿ ತರಬೇತಿ ಪಡೆದಿದ್ದ ಇಬ್ಬರು ಮಕ್ಕಳು ಈ ವರ್ಷ ನಡೆದಿದ್ದ ಖೇಲೊ ಇಂಡಿಯಾದಲ್ಲಿ ಪದಕವನ್ನು ಜಯಿಸಿದ್ದಾರೆ.
ಮಣಿಪುರ ಬಾಕ್ಸರ್ ಸರಿತಾ ಯುವತಿಯಾಗಿದ್ದಾಗ ತನ್ನ ರಾಜ್ಯದ ಬಂಡುಕೋರ ಗುಂಪಿನೊಂದಿಗೆ ಸೇರಲು ಬಯಸಿದ್ದರು. ಕೆಲವು ಸಶಸ್ತ್ರ ಬಂಡಾಯಕೋರರಿಗೆ ಶಸ್ತ್ರ ಕಳ್ಳಸಾಗಾಟಕ್ಕೂ ನೆರವು ನೀಡಿದ್ದರು. ಸರಿತಾ ವಾಸಿಸುತ್ತಿರುವ ಹಳ್ಳಿ ಇಂಪಾಲ್‌ನ ಹೊರವಲಯದ ಪರ್ವತ ಪ್ರದೇಶದಲ್ಲಿದ್ದು, ಮಾಯಾಂಗ್ ಇಂಪಾಲ ಹೆಸರಿನ ಈ ಹಳ್ಳಿ ಬಂಡುಕೋರರ ಸ್ವರ್ಗವಾಗಿತ್ತು.
ಆಕೆಯ ಇಬ್ಬರು ಸಹಪಾಠಿಗಳು ಬಂಡುಕೋರ ಗುಂಪಿಗೆ ಸೇರಿದ್ದು, ಈಗ ಅವರು ಎಲ್ಲಿದ್ದಾರೆಂದು ಗೊತ್ತಿಲ್ಲ. ಒಂದು ಕಾಲದಲ್ಲಿ ಬಂಡುಕೋರರಿಂದ ನಲುಗಿದ್ದ ಸರಿತಾರ ಗ್ರಾಮದಲ್ಲೀಗ ಮಾದಕ ದ್ರವ್ಯ ಜಾಲ ಬೇರುಬಿಟ್ಟಿದೆ. ಬಾಕ್ಸಿಂಗ್‌ನ ಮೂಲಕ ಡ್ರಗ್ಸ್ ವಿರುದ್ದ ಸಮರ ಸಾರಲು ನಿರ್ಧರಿಸಿದ ಸರಿತಾ 2012ರಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲರಾದಾಗ ಸಾಕಷ್ಟು ವರ್ಷಗಳ ಕಾಲ ತನ್ನ ಹಳ್ಳಿಯಲ್ಲಿ ಕಾಲ ಕಳೆದರು.
‘‘ನನ್ನ ಹಳ್ಳಿಯ 7-8 ತರಗತಿಯ ಮಕ್ಕಳು ಡ್ರಗ್ಸ್ ಸೇವಿಸುತ್ತಿದ್ದನ್ನು ನೋಡಿ ನನಗೆ ತುಂಬಾ ಬೇಸರವಾಯಿತು. ಆಗ ನಾನು ಗರ್ಭಿಣಿಯಾಗಿದ್ದೆ. ಮಕ್ಕಳ ಹೆತ್ತವರ ಬಳಿ ಹೋಗಿ ನಿಮ್ಮ ಮಕ್ಕಳನ್ನು ನನ್ನ ಮನೆಗೆ ಕಳುಹಿಸಿಕೊಡಿ. ನಾನು ಅವರಿಗೆ ಬಾಕ್ಸಿಂಗ್ ಕಲಿಸಿಕೊಡುವೆ ಎಂದು ಹೇಳಿದ್ದೆೆ. ನಿಧಾನವಾಗಿ ಹೆಚ್ಚಿನ ಮಕ್ಕಳು ಬರಲಾರಂಭಿಸಿದರು. ಆಗ ನಾವು ಕಮ್ಯುನಿಟಿ ಹಾಲ್‌ಗೆ ತರಬೇತಿ ಜಾಗ ಬದಲಾಯಿಸಿದೆವು’’ ಎಂದು ಸರಿತಾ ಹೇಳಿದ್ದಾರೆ. ‘ಸರಿತಾ ರೀಜನಲ್ ಬಾಕ್ಸಿಂಗ್ ಅಕಾಡಮಿ’ ಸುಸಜ್ಜಿತ ತರಬೇತಿ ಕೇಂದ್ರವಾಗಿದ್ದು, ಇದರಲ್ಲಿ 70 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. 2016ರಿಂದ ಕಾಲೇಜಿನ ಒಳಾಂಗಣದ ಹಾಲ್‌ನಲ್ಲಿ ಇದನ್ನು ನಡೆಸಲಾಗುತ್ತಿದೆ. ಕೇಂದ್ರದಲ್ಲಿ ಎರಡು ಬಾಕ್ಸಿಂಗ್ ರಿಂಗ್‌ಗಳಿವೆ.
ಅಕಾಡಮಿಯಲ್ಲಿ ಪಳಗಿರುವ ಅಂಬೆಶೊರಿ ದೇವಿ ಹಾಗೂ ಥೋಂಗಮ್ ಕುಂಜರಾಣಿ ದೇವಿ ಕ್ರಮವಾಗಿ 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದ್ದರು. ಇಬ್ಬರು ಖೇಲೊ ಇಂಡಿಯಾ ಯೋಜನೆಗೆ ಸೇರ್ಪಡೆಯಾಗಿದ್ದು, ತಿಂಗಳಿಗೆ 10,000 ರೂ.ಸ್ಟೈಪೆಂಡ್ ಪಡೆಯುತ್ತಿದ್ದಾರೆ. ಭಾರತದ ಪ್ರಮುಖ ಬಾಕ್ಸಿಂಗ್ ಕೇಂದ್ರವಾಗಿರುವ ಪುಣೆಯ ಕ್ರೀಡಾ ಆರ್ಮಿ ಸಂಸ್ಥೆ ಸರಿತಾ ಅಕಾಡಮಿಯಿಂದ ನಾಲ್ವರನ್ನು ಸೇರಿಸಿಕೊಂಡಿದೆ.
ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಅಕಾಡಮಿಗೆ ಭೇಟಿ ನೀಡಿದ ಬಳಿಕ 40 ತರಬೇತುದಾರರಿಗೆ ಭಾಗಶಃ ವೇತನ ನೀಡಲು ನಿರ್ಧರಿಸಿದ್ದಾರೆ. ಎನ್‌ಜಿಒವೊಂದು ಮೂವರು ಕೋಚ್‌ಗಳು ಹಾಗೂ ಓರ್ವ ಫಿಸಿಯೋಗೆ ಸಂಬಳ ನೀಡುತ್ತಿದೆ. ‘‘ಕೆಲವು ಹುಡುಗರು ಹಾಗೂ ಹುಡುಗಿಯರು ತೀರಾ ಬಡ ಕುಟುಂಬದಿಂದ ಬಂದಿದ್ದು, ಅವರಲ್ಲಿ ಶಾಲೆಗೆ ಹೋಗಲು ಹಣವಿಲ್ಲ. 2 ತಿಂಗಳ ಬಳಿಕ ಬುಧವಾರ ಹಳ್ಳಿಗೆ ವಾಪಸಾದಾಗ ನನಗೆ ಆಘಾತಕಾರಿ ಕಾದಿತ್ತು. ಓರ್ವ ಬಾಲಕ ತರಬೇತಿಗೆ ಬರುವುದನ್ನು ನಿಲ್ಲಿಸಿದ್ದ. ಆ ಕುರಿತು ವಿಚಾರಿಸಿದಾಗ ಆತ ಮತ್ತೆ ಡ್ರಗ್ಸ್ ಸೇವಿಸುತ್ತಿರುವ ವಿಚಾರ ತಿಳಿಯಿತು. ಪ್ರತಿಭಾವಂತ ಬಾಲಕನಾಗಿರುವ ಆತನನ್ನು ಮತ್ತೆ ಅಕಾಡಮಿಗೆ ಕರೆ ತರಲು ಪ್ರಯತ್ನಿಸುತ್ತೇನೆ’’ ಎಂದು ಸರಿತಾ ಹೇಳಿದ್ದಾರೆ.







