ಐಸಿಎಸ್‌ಇ, ಐಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಹೊಸದಿಲ್ಲಿ,ಮೇ.7: ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ (ಸಿಐಎಸ್‌ಸಿಇ) ನಡೆಸಿದ್ದ 10ನೇ ತರಗತಿ (ಐಸಿಎಸ್‌ಇ) ಮತ್ತು 12ನೇ ತರಗತಿ (ಐಎಸ್‌ಸಿ) ಪರೀಕ್ಷೆಗಳ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ.
10ನೇ ತರಗತಿ ಐಸಿಎಸ್‌ಇ ಪರೀಕ್ಷೆಯಲ್ಲಿ ಮುಂಬೈಯ ಜೂಹಿ ರೂಪೇಶ್ ಕಜರಿಯ ಮತ್ತು ಪಂಜಾಬ್‌ನ ಮನ್ಹರ್ ಬನ್ಸಲ್ ಶೇ.99.60 ಅಂಕಗಳೊಂದಿಗೆ ಅಗ್ರಸ್ಥಾನಿಗಳಾಗಿ ಹೊರಹೊಮ್ಮಿದ್ದಾರೆ. 12ನೇ ತರಗತಿ ಐಎಸ್‌ಸಿ ಪರೀಕ್ಷೆಯಲ್ಲಿ ಕೊಲ್ಕತಾದ ದೆವಂಗ್ ಕುಮಾರ್ ಅಗರ್ವಾಲ್ ಮತ್ತು ಬೆಂಗಳೂರಿನ ವಿಭ ಸ್ವಾಮಿನಾಥನ್ ನೂರಕ್ಕೆ ನೂರು ಅಂಕಗಳನ್ನು ಪಡೆದು ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಶಾಲಾ ಮಂಡಳಿಯ ಇತಿಹಾಸದಲ್ಲಿ ಐಎಸ್‌ಸಿಯಲ್ಲಿ ಶೇ.ನೂರು ಗಳಿಸಿದ ಮೊದಲ ವಿದ್ಯಾರ್ಥಿಗಳು ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಪರೀಕ್ಷೆಯ ಫಲಿತಾಂಶ ಶಾಲಾ ಶಿಕ್ಷಣ ಮಂಡಳಿಯ ಜಾಲತಾಣ ಸಿಐಎಸ್‌ಸಿಇ.ಆರ್ಗ್‌ನಲ್ಲಿ ಲಭ್ಯವಿದೆ. ಜೊತೆಗೆ ಎಸ್‌ಎಂಎಸ್ ಮೂಲಕವೂ ಫಲಿತಾಂಶವನ್ನು ತಿಳಿಯಬಹುದಾದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಫೆಬ್ರವರಿ 4ರಂದು ಆರಂಭವಾದ ಐಎಸ್‌ಸಿ ವಿದ್ಯಾರ್ಥಿಗಳ ಪರೀಕ್ಷೆ ಮಾರ್ಚ್ 25ರಂದು ಮುಕ್ತಾಯವಾಗಿತ್ತು. ಇದೇ ವೇಳೆ, ಫೆಬ್ರವರಿ 22ರಂದು ಆರಂಭವಾದ ಐಸಿಎಸ್‌ಇ ಪರೀಕ್ಷೆ ಮಾರ್ಚ್ 25ರಂದು ಕೊನೆಗೊಂಡಿತ್ತು. ಶೇ.98.54 ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ತೇರ್ಗಡೆ ಹೊಂದಿದ್ದರೆ ಶೇ.96.52 ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಾರೆ. ಬಾಲಕಿಯರು ಬಾಲಕರಿಗಿಂತ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.